ಸುದ್ದಿಮೂಲ ವಾರ್ತೆ
ಕೆಜಿಎಫ್, ಏ.3: ಕ್ಯಾಸಂಬಳ್ಳಿ ಹೋಬಳಿಯ ರಾಮಸಾಗರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದ್ದು, ಯಾವುದೇ ಕ್ರಮಕ್ಕೆ ಗ್ರಾ.ಪಂ ಅಧಿಕಾರಿಗಳು ಮುಂದಾಗಿಲ್ಲ ಎಂದು ರಾಮಸಾಗರ ಗ್ರಾಮಸ್ಥರು ಹಾಗೂ ಡಾ. ಬಿ.ಆರ್.ಆಂಬೇಡ್ಕರ್ ಸೇವಾ ಸಂಘ ರಾಜ್ಯಾಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ.
ಕೆಜಿಎಫ್ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಇಂತಹ ದುಸ್ಥಿತಿಯಲ್ಲಿ ಜೀವನ ಸಾಗಿಸಬೇಕಾದ ಪರಿಸ್ಥಿರಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಗ್ರಾಮದ ನಿವಾಸಿ ಸಂದೀಪ್ ರೆಡ್ಡಿ, ಸರ್ಕಾರಿ ಗುಂಡು ತೋಪನ್ನು ಒತ್ತುವರಿ ಮಾಡಿಕೊಂಡಿರುವ ಪರಿಣಾಮ ಎರಡು ದಿನದಿಂದ ಸುರಿದ ಮಳೆಯಿಂದ ಚರಂಡಿ ವ್ಯವಸ್ಥೆ ಹಾಳಾಗಿದೆ. ಕೊಳಚೆ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಡಾ.ಬಿ.ಆರ್.ಆಂಬೇಡ್ಕರ್ ಸೇವಾ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಮಾತನಾಡಿ, ಸುಮಾರು ದಿನಗಳಿಂದ ಲಿಖಿತ ರೂಪದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ದೂರು ನೀಡಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಒಂದೆರಡು ದಿನಗಳಲ್ಲಿ ಆಗಬೇಕಾದ ಕೆಲಸವನ್ನು ಇನ್ನೂ ವಿಳಂಬ ಮಾಡಲಾಗುತ್ತಿದೆ. ಇದರಿಂದ ಇಲ್ಲಿರುವ ಸುಮಾರು 20 ದಲಿತ ಮನೆಗಳಿಗೆ ಅನನುಕೂಲವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಶಿಕಲಾ, ಸರ್ಕಾರಿ ಜಾಗಕ್ಕೆ ಸರ್ವೆ ನಂಬರ್ ಆಗಿರುವುದರಿಂದ ತಹಶೀಲ್ದಾರ್ ಗಮನಕ್ಕೆ ತಂದು ಶ್ರೀಘ್ರದಲ್ಲೆ ಸಮಸ್ಯೆ ಬಗ್ಗೆ ಹರಿಸಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ನಾಗರಾಜ್, ವಿನೋದ್, ರವಿಕುಮಾರ್, ಲಕ್ಷ್ಮಮ್ಮ, ರೇಣುಕಾ, ಮಂಗಮ್ಮ, ಸಂಪೂರ್ಣಮ್ಮ, ರಾಧಿಕಾ, ಪವಿತ್ರ ನೂರಾರು ಗ್ರಾಮಸ್ಥರು ಹಾಜರಿದ್ದರು.