ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಜೋರಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಣ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿ ಕಾಣಿಸಿಕೊಳ್ಳಲಾರಂಭವಾಗಿದೆ. ಡಿಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಕಾಂಗ್ರೆಸ್ನ ಆಂತರಿಕ ಭಿನ್ನಮತ ಸ್ಫೋಟಗೊಳ್ಳುವ ಸುಳಿವು ದೊರೆತಿದೆ. ‘ಎನ್ಡಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ. ಡಿಕೆ ಶಿವಕುಮಾರ್ ಅವರೂ ಆಕಾಂಕ್ಷಿ. ಆದರೆ, ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡಲಾರದು ಎಂದು ಹೇಳಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಡಿಕೆ ಶಿವಕುಮಾರ್ 2020ರಲ್ಲಿ ದಿನೇಶ್ ಗುಂಡೂರಾವ್ ಅವರ ನಂತರ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಕಿರಿಯ ವ್ಯಕ್ತಿಗೆ ಉನ್ನತ ಹುದ್ದೆಯ ಅವಕಾಶ ಯಾಕೆ ನೀಡಬಾರದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇದು ತಾನು ಸ್ಪರ್ಧಿಸುವ ಕೊನೆಯ ಚುನಾವಣೆ ಎಂದಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ದಶಕದಿಂದ ಇರುವ ಪೈಪೋಟಿಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ರಾಜ್ಯದ ಮೂಲಕ ಹಾದುಹೋದಾಗ ತುಸು ವಿರಾಮ ದೊರೆತಿತ್ತು. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಉಭಯ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದರು.
ಆದರೆ, ಫೆಬ್ರುವರಿಯಲ್ಲಿ ಉಭಯ ನಾಯಕರು ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರತ್ಯೇಕ ಬಸ್ ಯಾತ್ರೆಗಳನ್ನು ಕೈಗೊಂಡಿದ್ದರು. ಆದರೆ, ಇಬ್ಬರೂ ನಾಯಕರೂ ಒಗ್ಗಟ್ಟಾಗಿದ್ದಾರೆ. ಒಗ್ಗಟ್ಟಿನ ಹೋರಾಟದ ಅಗತ್ಯದ ಬಗ್ಗೆ ಅವರಿಬ್ಬರಿಗೆ ಅರಿವಿದೆ ಎಂದು ಪಕ್ಷದ ಇತರ ಹಿರಿಯ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಹೆಚ್ಚಿನ ವಿಷಯಗಳಲ್ಲಿ ಇಬ್ಬರಲ್ಲಿ ಒಮ್ಮತ ಮೂಡಿದ್ದರೂ, ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯ ವಿಚಾರದಲ್ಲಿ ಇಬ್ಬರಲ್ಲೂ ಬಲವಾದ ಭಿನ್ನಮತ ಇರುವುದು ಈ ಹಿಂದೆಯೂ ಹಲವು ಬಾರಿ ಪ್ರಕಟಗೊಂಡಿದೆ.