ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.4: ನನ್ನ ಕ್ಷೇತ್ರದ ಸಾತನೂರಿನಲ್ಲಿ ನೈತಿಕ ಪೊಲೀಸ್ ಗಿರಿಯ ಭಾಗವಾಗಿ ಕೊಲೆಯಾಗಿರುವ ಇದ್ರೀಸ್ ಪಾಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು, ಗೃಹ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಈ ಘಟನೆ ನಡೆದಿದ್ದರೂ ಸಹ ಪೊಲೀಸರು ಈ ವಿಚಾರವಾಗಿ ದೂರು ದಾಖಲಿಸಿಕೊಳ್ಳುವವರೆಗೂ ನಾನು ಪ್ರತಿಕ್ರಿಯೆ ನೀಡಿರಲಿಲ್ಲ. ಸ್ಥಳೀಯವಾಗಿ ನಮ್ಮ ನಾಯಕರು ಅಲ್ಲಿ ಕಾರ್ಯಪ್ರವೃತ್ತರಾಗಿ ನಮಗೆ ನಿರಂತರವಾಗಿ ಮಾಹಿತಿ ನೀಡಿದ್ದಾರೆ. ಈ ಕೊಲೆಗೆ ಕಾರಣರಾದ ವ್ಯಕ್ತಿ ಬಿಜೆಪಿ ನಾಯಕರಿಗೆ ಆಪ್ತನಾಗಿದ್ದು, ಈ ನೈತಿಕ ಪೊಲೀಸ್ ಗಿರಿಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಹೊಣೆ ಮಾಡುತ್ತೇನೆ. ಕಾರಣ ಅವರು ಈ ಹಿಂದೆ ನೈತಿಕ ಪೊಲೀಸ್ ಗಿರಿಗೆ ಅವರು ಬೆಂಬಲ ನೀಡಿದ್ದರು. ರೈತ ಜಾನುವಾರುಗಳನ್ನು ಸಂತೆಯಲ್ಲಿ ಖರೀದಿಸಿದ ರಸೀದಿ ಇದ್ದರೂ ಅವನಿಗೆ 2 ಲಕ್ಷ ಹಣದ ಬೇಡಿಕೆ ಇಟ್ಟು, ಹತ್ಯೆ ಮಾಡಿದ್ದಾರೆ ಎಂದು ಹೇಳಿದರು. ಈ ಕೊಲೆಗೆ ಸರ್ಕಾರವೇ ಕಾರಣ. ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಲ್ಪಸಂಖ್ಯಾತರು ಬದುಕಲು ಅವಕಾಶ ಮಾಡಿಕೊಡಬೇಕು. ಚುನಾವಣೆ ಸಮಯದಲ್ಲಿ ಇಂತಹ ಗೊಂದಲ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ. ಈ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಅವರನ್ನು ಬಂಧಿಸದೇ ಅವರನ್ನು ರಕ್ಷಣೆ ಮಾಡಿದರೆ, ಇದಕ್ಕೆ ಅಧಿಕಾರಿಗಳು ಜವಾಬ್ದಾರಿಯಾಗಲಿದ್ದಾರೆ. ಹತ್ಯೆ ಮಾಡಿರುವವರು ನಿಮ್ಮ ಕಾರ್ಯಕರ್ತನೋ, ಆತ್ಮೀಯನೋ ಅವನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಕೇಳಿದಾಗ, ‘ನಾವು ಯಾವುದೇ ಗಲಭೆ ಮಾಡಿಸುತ್ತಿಲ್ಲ. ಇದೆಲ್ಲವೂ ಮುಖ್ಯಮಂತ್ರಿಗಳು ಮಾಡಿಕೊಂಡಿರುವ ಸ್ವಯಂಕೃತ ಅಪರಾಧ. ಮುಸಲ್ಮಾನರ ಮೀಸಲಾತಿ ಕಿತ್ತುಹಾಕಿ ನಮಗೆ ನೀಡಿ ಎಂದು ಒಕ್ಕಲಿಗರು, ಲಿಂಗಾಯತರು ಕೇಳಿದ್ದರಾ? ಚುನಾವಣೆ ಸಮಯದಲ್ಲಿ ಬಿಜೆಪಿ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಕೆಲವು ಸಮುದಾಯದವರು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ ಎಂದು ಕೇಳಿವೆ. ಈ ಸರ್ಕಾರ ಸಂವಿಧಾನಬದ್ಧವಾಗಿ ಕೆಲಸ ಮಾಡಿ ಎಲ್ಲಾ ವರ್ಗದವರನ್ನು ರಕ್ಷಣೆ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿ, ಈಗ ಅವರ ಹಕ್ಕು ಕಸಿಯುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಈ ಎಲ್ಲ ವರ್ಗಗಳ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಲಾಭದ ನಡೆಗೆ ರಾಜ್ಯ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ಹಿಂದುಳಿದ ಮೀಸಲಾತಿ ವರ್ಗಕ್ಕೆ ಸೇರಿಸಿ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೂ ಈ ಸರ್ಕಾರ ಅನ್ಯಾಯ ಮಾಡುತ್ತಿದೆ. ರಾಜ್ಯಕ್ಕೆ ಕಳಂಕ ತಂದು ಎಲ್ಲ ಸಮಾಜದವರು ಪರಸ್ಪರ ಕಿತ್ತಾಡುವಂತೆ ಮಾಡಿದ್ದಾರೆ. ಇದೆಲ್ಲದಕ್ಕೂ ಮುಖ್ಯಮಂತ್ರಿಗಳೇ ನೇರ ಕಾರಣ’ ಎಂದರು.