ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.5: ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್. ಯಡಿಯೂರಪ್ಪ ಚುನಾವಣೆ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆ ಬಗ್ಗೆ ನಮ್ಮ ನಿಲುವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಆದರೆ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅವರಿಬ್ಬರ ನಡುವೆ ಏನೇನಿದೆ ಎನ್ನುವುದು ಗೊತ್ತಿದೆ ಎಂದರು.
ಹಾಸನ ಜೆಡಿಎಸ್ ಟಿಕೆಟ್ ಬಗ್ಗೆ ಮಾತನಾಡಿದ ದೇವೇಗೌಡರು, ಹಾಸನ ನನ್ನ ತವರು ಜಿಲ್ಲೆ. ಇದರ ಬಗ್ಗೆ ನಾನು ಕೇರ್ ತೆಗೆದುಕೊಳ್ಳುತ್ತೇನೆ. ಆದರೆ ನನಗೆ ಬಿಜೆಪಿ ಜೊತೆಗಾಗಲೀ, ಕಾಂಗ್ರೆಸ್ ಜೊತೆಯಾಗಲಿ ಹೋಗುವುದು ಇಷ್ಟವಿಲ್ಲ. ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ದೇವೇಗೌಡ ಅವರು ತಿಳಿಸಿದರು.
ಇದಕ್ಕೂ ಮುನ್ನ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ದೇವೇಗೌಡ ಅವರು ಔಪಚಾರಿಕವಾಗಿ ಮಾತುಕತೆ ನಡೆಸಿದರು.
ಅನಾರೋಗ್ಯ ಕಾರಣದಿಂದ ಕೆಲ ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಹಲವು ದಿನಗಳ ಬಳಿಕ ದೆಹಲಿಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ರಾಷ್ಟ್ರಪತಿಗಲಿಗೆ ದೇವೇಗೌಡರೂ ಸಹ ಶುಭಾಶಯಗಳನ್ನು ತಿಳಿಸಿದರು.