ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.5: ತೀವ್ರ ಕುತೂಹಲ ಕೆರಳಿಸಿದ ಮುಖ್ಯಮಂತ್ರಿಗಳ ತುರ್ತು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಚಿತ್ರನಟ ಸುದೀಪ್ ಬಿಜೆಪಿಗೆ ಸೇರುತ್ತಾರೆ ಎಂಬುದನ್ನು ಹುಸಿಗೊಳಿಸಿ, ಕೇವಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ ನನ್ನ ಬೆಂಬಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಖಾಸಗಿ ಹೋಟೆಲ್ನಲ್ಲಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಕ್ಷಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ನಾನು ಚಿಕ್ಕವನಿದ್ದಾಗಿನಿಂದಲೂ ನನ್ನ ಎಲ್ಲಾ ಕಷ್ಟ ಕಾಲದಲ್ಲಿ ನೆರವಿಗೆ ಬಂದ ಬಸವರಾಜ ಬೊಮ್ಮಾಯಿ ಅವರನ್ನು ನಾನು ಮೊದಲಿನಿಂದಲೂ ಮಾಮ ಎಂದು ಸಂಬೋಧಿಸುತ್ತಿದ್ದು, ಈಗಲೂ ಅದೇ ಗೌರವದ ಭಾವನೆ ಇಟ್ಟುಕೊಂಡಿದ್ದೇನೆ. ಬಿಜೆಪಿ ಸೇರುವ ಪ್ರಶ್ನೆ ಇಲ್ಲ. ಆದರೆ, ಬೊಮ್ಮಾಯಿ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಸುದೀಪ್ ಸ್ಪಷ್ಟಪಡಿಸಿದರು.
ಚುನಾವಣಾ ರಾಜಕೀಯಕ್ಕೆ ನಾನು ಧುಮುಕುವುದಿಲ್ಲ. ಸಿನಿಮಾ ಮಾಡಲು ಸಮಯ ಸಾಲುತ್ತಿಲ್ಲ. ಅನಿವಾರ್ಯ ಎಂಬ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಸ್ಪರ್ಧಿಸುವುದಾದರೆ ಎಲ್ಲಾ ಅಗತ್ಯ ತಯಾರಿ ಮಾಡಿಕೊಂಡೇ ಸ್ಪರ್ಧೆ ಮಾಡುತ್ತೇನೆ ಎಂದು ವಿವರಣೆ ನೀಡಿದ ನಟ ಸುದೀಪ್, ಬಿಜೆಪಿಗೆ ಸೇರುವುದಿಲ್ಲ ಎಂದು ಪದೇ ಪದೇ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಚುನಾವಣೆಗೆ ಯಾವುದೇ ಸಂಭಾವನೆ ಪಡೆಯದೆ ಪ್ರಚಾರ ಮಾಡುವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರು ಎಲ್ಲಿ ನನ್ನ ಪ್ರಚಾರದ ಅವಶ್ಯತೆ ಇದೆ ಎಂದು ಹೇಳುತ್ತಾರೆ ಅಲ್ಲಿ ಪ್ರಚಾರ ಮಾಡುತ್ತೇನೆ ಎಂದರು.
ಚಿತ್ರನಟನಾದ ನನಗೆ ಎಲ್ಲರೂ ಬೇಕು. ಆದರೆ, ನನಗೆ ಕಷ್ಟಕಾಲದಲ್ಲಿ ಯಾರು ಸಹಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಅದನ್ನು ಬಹಿರಂಗಪಡಿಸುವ ಅಗತ್ಯ ಇಲ್ಲ. ನನಗೆ ನೆರವು ನೀಡಿದವರ ಪರ ನಾನು ಇರುತ್ತೇನೆ. ಬೊಮ್ಮಾಯಿ ಅವರು ನನಗೆ ಸಹಾಯ ಮಾಡಿದಾಗ ಅವರು ಬಿಜೆಪಿಯಲ್ಲಿ ಇರಲಿಲ್ಲ. ಆದರೆ, ಅವರು ಈಗ ಬಿಜೆಪಿಯಲ್ಲಿ ಇದ್ದಾರೆ ಅಥವಾ ಮುಖ್ಯಮಂತ್ರಿ ಆಗಿದ್ದಾರೆ ಎಂದು ನಾನು ಅವರಿಗೆ ಬೆಂಬಲ ನೀಡುತ್ತಿಲ್ಲ. ನನಗೆ ಅವರು ಮಾಡಿದ ನೆರವಿನ ಕಾರಣಕ್ಕಾಗಿ ಅವರಿಗೆ ವೈಕ್ತಿಕವಾಗಿ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬೇರೆ ಪಕ್ಷದವರು ಪ್ರಚಾರಕ್ಕೆ ಕರೆದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡಿದ ಅವರು, ಬೊಮ್ಮಾಯಿ ಪ್ರೀತಿಗಾಗಿ ಅವರ ಪರವಾಗಿ ನಿಂತಿದ್ದೇನೆ. ಪ್ರಚಾರದ ಬ್ಲೂಪ್ರಿಂಟ್ ಇನ್ನು ಸಿದ್ದವಾಗಿಲ್ಲ. ಆದರೆ, ನನ್ನ ಕಷ್ಟಗಳ ಕುರಿತು ಅವರಿಗೂ ಅರಿವಿದೆ ಎಂದು ಹೇಳಿದರು.
ಪ್ರಚಾರಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ:
ನಟ ಸುದೀಪ್ ಬೆಂಬಲದಿಂದ ಪಕ್ಷ ಹಾಗೂ ಪ್ರಚಾರಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದೀಪ್ ಅವರು ಜನಪ್ರಿಯ ನಟರಾಗಿರುವುದರಿಂದ ಅವರ ಪ್ರಚಾರವನ್ನು ಸೂಕ್ತವಾಗಿ ಆಯೋಜಿಸಲಾಗುವುದು. ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ಸುದೀಪ್ ಅವರಿಗೆ ದೇಶದ ಹಾಗೂ ಕರ್ನಾಟಕದ ಬಗ್ಗೆ ಅವರದ್ದೇ ಆದ ವಿಚಾರಧಾರೆಗಳಿವೆ. ಅವುಗಳನ್ನು ಮುಂದೆ ಪ್ರಚಾರದಲ್ಲಿ ತಿಳಿಸುತ್ತಾರೆ. ನಮ್ಮ ವೈಯಕ್ತಿಕ ಸಂಬಂಧದಿಂದ ನಿರ್ಣಯ ತೆಗೆದುಕೊಂಡಿದ್ದಾರೆ. ನಾನು ಸೂಚಿಸುವಲ್ಲಿ ಪ್ರಚಾರ ಮಾಡುತ್ತಾರೆ. ಬಿಜೆಪಿ ಪರವಾಗಿಯೂ ಅವರು ಪ್ರಚಾರ ಮಾಡುವುದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಆರ್. ಅಶೋಕ್, ಡಾ. ಸುಧಾಕರ್, ಮುನಿರತ್ನ ಹಾಜರಿದ್ದರು.