ಸುದ್ದಿಮೂಲ ವಾರ್ತೆ ,
ಕಲಬುರಗಿ, ಏ.5: ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ರೈತ ಪರ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಅವರು ತಮ್ಮ ಅನೇಕ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಪಕ್ಷದ ಧ್ವಜ ನೀಡಿ ಬರ ಮಾಡಿಕೊಂಡರು. ನಂತರ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಹುಟ್ಟು ಹೋರಾಟಗಾರರು, ರೈತ ಪರ ಕಾಳಜಿ ಹೊಂದಿರುವ ನಾಯಕರಾದ ಕೇದಾರಲಿಂಗಯ್ಯ ಹಿರೇಮಠ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದದ್ದು, ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದಿಂದ ಭ್ರಷ್ಟಾಚಾರ, ನಿರುದ್ಯೋಗ ಮುಗಿಲು ಮುಟ್ಟಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ನೀಡಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೇದಾರಲಿಂಗಯ್ಯ ಹಿರೇಮಠ ಅವರ ಬೆಂಬಲಿಗರಾದ ವಿಜಯಕುಮಾರ ಹಿರೇಮಠ, ಭಗವಂತರಾಯಗೌಡ ಪಾಟೀಲ, ಕೆ.ಎಸ್. ಕೋಬಾಳ, ಚಂದ್ರಶೇಖರ ಮಲ್ಲಾಬಾದ, ಸದಾನಂದ ಪಾಟೀಲ, ಪ್ರದೀಪ ಕಟ್ಟಿ, ಸಿದ್ದಲಿಂಗ ಸಾಹುಕಾರ, ಶಹಬುದ್ದೀನ್ ಪಟೇಲ್ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಶಾಸಕ ಡಾ. ಅಜಯ್ ಸಿಂಗ್, ಶರಣಬಸಪ್ಪಾ ದರ್ಶನಾಪುರ್, ಮಾಜಿ ಶಾಸಕ ಬಿ.ಆರ್ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ ಮಾತನಾಡಿದರು. ಶಾಸಕ ಎಂ ವೈ ಪಾಟೀಲ್, ಶಾಸಕಿ ಕನೀಜ್ ಫಾತಿಮಾ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್, ನೀಲಕಂಠರಾವ ಮೂಲಗೆ, ಶಿವಾನಂದ ಪಾಟೀಲ್ ಮರತೂರ್, ಹಣಮಂತ ಭೂಸನೂರ, ಚಂದ್ರಿಕಾ ಪರಮೇಶ್ವರ, ಲತಾ ರಾಠೋಡ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.