ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.5: ನರೇಂದ್ರ ಮೋದಿಯವರ ಆಡಳಿತ, ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವವನ್ನು ಒಪ್ಪಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರು ಮತ್ತು ಇತರರು ಪಕ್ಷ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಕಲ್ಯಾಣ ಕರ್ನಾಟಕ, ಹಳೆ ಮೈಸೂರು, ಕಿತ್ತೂರು ಕರ್ನಾಟಕ ಭಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತವನ್ನು ಜಗದ್ವಂದ್ಯ ಮಾಡುವ ರಾಜಕಾರಣ ನಮ್ಮದು. ಬೇರೆ ಪಕ್ಷಗಳು ಪರಿವಾರವಾದ, ಕುಟುಂಬವಾದದಲ್ಲಿ ನಂಬಿಕೆ ಇಟ್ಟಿವೆ. ಬಿಜೆಪಿ ಬಲ ರಾಜ್ಯದಾದ್ಯಂತ ವೃದ್ಧಿಸಿದೆ. ಮುಂದಿನ ಸರಕಾರ ನಮ್ಮದೇ. ಆ ಬಹುಮತದ ಸರಕಾರಕ್ಕೆ ಸ್ವಾಗತ ಕೋರೋಣ ಎಂದು ತಿಳಿಸಿದರು.
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರು ಮಾತನಾಡಿ, ನಾನು ಕಾಂಗ್ರೆಸ್- ಜೆಡಿಎಸ್ನಲ್ಲಿ ಹೋರಾಟ ಮಾಡಿ ಬೆಳೆದವರು. ಇವೆರಡೂ ಪಕ್ಷಗಳಲ್ಲಿ ಕಾರ್ಯಕರ್ತರು ಉಸಿರುಗಟ್ಟಿ ಕೆಲಸ ಮಾಡಬೇಕಿದೆ. ನರೇಂದ್ರ ಮೋದಿಜಿ ಅವರ ನಾಯಕತ್ವ ಮತ್ತು ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ ಎಂದರು.
ಬಿಜೆಪಿಯ ಹಲವು ನಾಯಕರು ಮಂಡ್ಯದಲ್ಲಿ ಪಕ್ಷ ಕಟ್ಟಲು ಆಹ್ವಾನಿಸಿದ್ದಾರೆ. ಎರಡೂ ಪಕ್ಷಗಳ ದೊಂಬರಾಟ ನಿಲ್ಲಿಸಲು ಬಿಜೆಪಿಯಿಂದ ಸಾಧ್ಯ. ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಶಕ್ತಿಯಾಗಿ ನಾವು ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಡಾ. ಸುಧಾಕರ್, ಗೋಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಜಿಲ್ಲಾಧ್ಯಕ್ಷರಾದ ಉಮೇಶ್, ಸಂಜಯ್ ಪಾಟೀಲ್ ಮತ್ತಿತರರು ಇದ್ದರು.
ಮಾಜಿ ಸಂಸದ ಶಿವರಾಮೇಗೌಡ, ಪುತ್ರ ಚೇತನ್ಗೌಡ, ಕಲಬುರಗಿ ಗುರುಮಿಠಕಲ್ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ವೈದ್ಯ ಯೋಗೇಶ್ ಬೆಸ್ತರ್, ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಮುಖಂಡ ಚಿಕ್ಕರೇವಣ್ಣ ಅವರು ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆಗೊಂಡರು.