ಸುದ್ದಿಮೂಲ ವಾರ್ತೆ ,
ಕಲಬುರಗಿ, ಏ.5: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬರು(ಬಿ) ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷಾ ನಡೆಯುತ್ತಿದ್ದಾಗ ಸಾಮೂಹಿಕ ನಕಲಿಗೆ ಸಹಕರಿಸಿದ ಸಂಬಂಧ ಒಬ್ಬ ಮುಖ್ಯಶಿಕ್ಷಕ ಸೇರಿ 16 ಶಿಕ್ಷಕರನ್ನು ಅಮಾನತುಗೊಳಿಸಿ
ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿ ಆನಂದ ಪ್ರಕಾಶ ಮೀನಾ ಅವರು ಆದೇಶ ಹೊರಡಿಸಿದ್ದಾರೆ.
ಮುಖ್ಯಶಿಕ್ಷಕ ಗೊಲ್ಲಾಳಪ್ಪ ಗುರಪ್ಪ, ಶಿಕ್ಷಕರಾದ ಭೀಮಾಶಂಕರ ಮಡಿವಾಳ, ರವೀಂದ್ರ, ದೇವೀಂದ್ರಪ್ಪ ಯರಗಲ್, ಸವಿತಾಬಾಯಿ ಜಮಾದಾರ್, ಅನಿತಾ, ನಾಗಮ್ಮ, ರೇವಣಸಿದ್ದಪ್ಪ, ಪರವೀನ ಸುಲ್ತಾನ್, ಬಾಬು ಪವಾರ, ಕವಿತಾ ಡಿ., ಜಯಶ್ರೀ ಶೇರಿ, ವಿದ್ಯಾವತಿ, ಗಾಯತ್ರಿ ರಾಜೇಂದ್ರ ಬಿರಾದಾರ, ಮೀನಾಕ್ಷಿ ದುದನಿಕರ ಮತ್ತು ಅರುಣಕುಮಾರ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಭದ್ರತೆಯ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಸೋಮವಾರ ಗೊಬ್ಬರು(ಬಿ) ಪ್ರೌಢ ಶಾಲೆಗೆ ಭೇಟಿ ನೀಡಿದ್ದರು. ಕೇಂದ್ರದ ಆವರಣದಲ್ಲಿ ಸಾಮೂಹಿಕ ನಕಲಿಗೆ ಬಳಸಿದ್ದ ಮೈಕ್ರೊ ಝಿರಾಕ್ಸ್ ಪುಸ್ತಕ, ಚೀಟಿಗಳು ಬಿದ್ದಿದ್ದವು. ನಿಷೇಧಿತ ಪ್ರದೇಶದಲ್ಲಿ ಓಡಾಡಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ, ಕಸ್ಟೋಡಿಯನ್, ಸ್ಥಾನಿಕ ಜಾಗೃತ ದಳ ಹಾಗೂ ಕೋಣೆಯ ಮೇಲ್ವಿಚಾರಕರು ಪರೀಕ್ಷೆಯ ಪಾವಿತ್ರೆ ಕಾಪಾಡುವಲ್ಲಿ ವಿಫಲವಾಗಿದ್ದಾಗಿ ಎಸ್ಪಿ ಅವರು ಶಾಲಾ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ.