ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.5: ಈಗಾಗಲೇ ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ಈಗಾಗಲೇ ಜೆಡಿಎಸ್ನ ಎರಡನೇ ಪಟ್ಟಿ ಕಳೆದ ಸೋಮವಾರ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಂದೂ ಸಹ ಪಟ್ಟಿ ಬಿಡುಗಡೆ ಮಾಡದೆ ಅದನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.
ಪ್ರಕಟಿಸಿದಂತೆ ಬುಧವಾರ ಪಟ್ಟಿ ಬಿಡುಗಡೆ ಮಾಡುವ ನಿರೀಕ್ಷೆ ಇತ್ತು. ಆದರೆ, ಇಂದೂ ಸಹ ಎರಡನೇ ಪಟ್ಟಿ ಬಿಡುಗಡೆ ಮಾಡದೆ ಪುನಃ ಮುಂದೂಡಿಕೆ ಮಾಡಲಾಗಿದೆ. ಕಾಂಗ್ರೆಸ್ನ ಎರಡನೇ ಪಟ್ಟಿ ಮತ್ತು ಬಿಜೆಪಿಯ ಮೊದಲನೇ ಪಟ್ಟಿ ಬಿಡುಗಡೆಯಾದ ಬಳಿಕ ಜೆಡಿಎಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿ ಮುಂದೂಡುತ್ತಲೇ ಹೋಗುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ವಂಚಿತರ ತಮ್ಮ ಪಕ್ಷಕ್ಕೆ ಬರಬಹುದು ಎಂಬ ನಿರೀಕ್ಷೆ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಎರಡನೇ ಪಟ್ಟಿ ಬಿಡುಗಡೆಗೆ ವಿಳಂಬ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಆಲ್ಲದೆ, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಿರ್ಧಾರ ತೆಗೆದುಕೊಳ್ಳಬೇಕಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೆಹಲಿಯಲ್ಲಿ ನಡೆಯುತ್ತಿರವು ರಾಜ್ಯಸಭೆ ಕಲಾಪದಲ್ಲಿ ಭಾಗವಹಿಸಲು ತೆರಳಿದ್ದು, ಅವರು ಗುರುವಾರ ಬೆಂಗಳೂರಿಗೆ ಮರಳುವ ಹಿನ್ನೆಲೆಯಲ್ಲಿ ಎರಡನೇ ಪಟ್ಟಿ ಪ್ರಟಕ ವಿಳಂಬ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.
ಈ ಎಲ್ಲಾ ಬೆಳವಣಿಗೆ ಮಧ್ಯೆ ಜೆಡಿಎಸ್ ಸಹ ತನ್ನ ಎರಡನೇ ಪಟ್ಟಿ ಬಿಡುಗಡೆಗೆ ಮುಂದೂಡುತ್ತಲೇ ಕಾದು ನೋಡುವ ತಂತ್ರ ಅನುಸರಿಸುತ್ತಿದೆ