ಸುದ್ದಿಮೂಲ ವಾರ್ತೆ
ಹೊಸಕೋಟೆ, ಏ.6: ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾಲೂಕಿನ ಪ್ರತಿ ಮನೆಗಳಿಗೆ ಹೋಗಿ ಮತದಾರರಿಗೆ ಮನಮುಟ್ಟುವಂತೆ ತಿಳಿಸಬೇಕು ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ತಾಲೂಕಿನ ತಿರುಮಲ ಶೆಟ್ಟಹಳ್ಳಿ ಕಲ್ಯಾಣ ಮಂಟಪದಲ್ಲಿ ಅನುಗೊಂಡನ ಹಳ್ಳಿ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆ ಮತ್ತು ಕಾರ್ಯಕ್ರಮಗಳನ್ನು ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಮತದಾರರನ್ನು ಸಂಪರ್ಕಿಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆಕಾರ್ಯಕರ್ತರು ತಿಳಿಸಬೇಕು. 2004 ರಿಂದ 2023ರ ವರೆಗೂ ನಾನು ಆರು ಚುನಾವಣೆಗಳನ್ನ 30 ವರ್ಷಗಳಲ್ಲಿ ಎದುರಿಸಿದ್ದೇನೆ. ತಾಲೂಕಿಗೆ ಸಾಕಷ್ಟು
ಅಭಿವೃದ್ಧಿ ಮಾಡಿದ್ದೇನೆ. ತಾಲೂಕಿನ ಒಡನಾಟ ಪ್ರೀತಿ ವಿಶ್ವಾಸ ಸ್ನೇಹದಿಂದ 19 ವರ್ಷಗಳು ತಾಲೂಕಿನ ಜನತೆ ಜೊತೆ ಕಳೆದಿದ್ದೇನೆ ಎಂದು ಹೇಳಿದರು.
ನನ್ನ ಅಧಿಕಾರದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಸಮಗ್ರವಾಗಿ ಮಾಡಲಾಗಿದೆ. 150 ಕೋಟಿ ರೂ ವೆಚ್ಚದಲ್ಲಿ ಕೆರೆಗಳು ತುಂಬಿಸುವ ಕಾರ್ಯ ಅತಿ ಶೀಘ್ರದಲ್ಲೇ ಆಗಲಿದೆ. ಕಾವೇರಿ ಮೆಟ್ರೋ ರೈಲು ನಗರಕ್ಕೆ ಬರಲಿದೆ. ಜಲಜೀವನ್ ಯೋಜನೆ ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು 150 ಕೋಟಿ ವೆಚ್ಚದಲ್ಲಿ ಸರ್ಕಾರ ಹಣ ನೀಡಿದೆ. ನಗರಕ್ಕೆ ನಾಲ್ಕನೇ ಹಂತ 60 ಕೋಟಿ ರೂ ವೆಚ್ಚದಲ್ಲಿಅಭಿವೃದ್ಧಿ ಪಡಿಸಲಾಗಿದೆ. ಅಮೃತ ಯೋಜನೆಯಲ್ಲಿ 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಬರದಿಂದ ಸಾಗುತ್ತಿವೆ ಎಂದು ವಿವರಿಸಿದರು.
ತಾಲೂಕಿನಲ್ಲಿ 2004ರಲ್ಲಿ ಬಿಎನ್ ಬಚ್ಚೇಗೌಡರ ದುರಡಳಿತ ಬ್ರಿಟಿಷರ ಆಳ್ವಿಕೆಯಂತೆ ಸರ್ವಾಧಿಕಾರ ತಾಲೂಕಿನಲ್ಲಿ ಇತ್ತು ಪ್ರಜಾಪ್ರಭುತ್ವದ ಚುನಾವಣೆ ಹಿಂದೆ ನಡೆದಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಾಂತಿ ಸೌಹಾರ್ದತೆ ನೆಮ್ಮದಿ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನ ಬೆಂಬಲಿಸಿ ಗೆಲ್ಲಿಸಬೇಕು. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನಿತೀಶ್ ಪುರುಷೋತ್ತಮ ಮಾತನಾಡಿ, ಹೊಸಕೋಟೆ ಕ್ಷೇತ್ರದ ಜನತೆಯ ನಾಡಿಮಿಡಿತವನ್ನು ತಿಳಿದುಕೊಂಡಿದ್ದೇನೆ. ಪ್ರತಿ ಗ್ರಾಮ ಮಟ್ಟದಲ್ಲಿ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ ಎಂದು ಕಾರ್ಯಕರ್ತರಲ್ಲಿ ಇದ್ದ ಊಹಾಪೋಹ ಗೊಂದಲಗಳಿಗೆ ತೆರೆ ಎಳೆದಿದ್ದೇನೆ. 2023 ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ ಸತೀಶ್, ಬಿಎಂಆರ್ಡಿ ಅಧ್ಯಕ್ಷ ಶಂಕರೇಗೌಡ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸಿ.ನಾಗರಾಜ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಎಂ ನಾರಾಯಣಸ್ವಾಮಿ ಗ್ರಾಮಪಂಚಾಯತಿ ಅಧ್ಯಕ್ಷೆ ಮಮತಾ ಶ್ರೀನಾಥ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ಆರ್ ಮುನಿಯಪ್ಪ, ಮುಖಂಡರಾದ ಅರುಣ್ ಕುಮಾರ್, ವಿನೋದ್ ರೆಡ್ಡಿ ಸಿದ್ದನಪುರ ಸಂತೋಷ್, ಅನು ರೆಡ್ಡಿ, ರಘುವೀರ್, ಮುಂತಾದವರು ಇದ್ದರು.