ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.6: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ನಕಲಿ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದಾಡಿ ಆಕಾಂಕ್ಷಿಗಳ ಆತಂಕ ಹೆಚ್ಚಿಸಿತು.
ಮಂಗಳವಾರ ನವದೆಹಲಿಯಲ್ಲಿ 49 ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡು ಇನ್ನೇನು ಅಧಿಕೃತ ಪ್ರಕಟಣೆ ಬಾಕಿ ಇರುವಾಗಲೇ ಇಂದು ಕಾಂಗ್ರೆಸ್ ಕೇಂದ್ರ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ ಎನ್ನುವ ನಕಲಿ ಪಟ್ಟಿಯಲ್ಲಿ ಅನೇಕ ಕ್ಷೇತ್ರಗಳ ಹೆಸರುಗಳು ಅದಲು ಬದಲಾಗಿದ್ದು ಆಕಾಂಕ್ಷಿಗಳು ಮತ್ತು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿತು.
ಪಟ್ಟಿ ಪ್ರಕಟವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಅಂತಹ ಯಾವುದೇ ಪಟ್ಟಿ ಎಐಸಿಸಿಯಿಂದ ಪ್ರಕಟಗೊಂಡಿಲ್ಲ ಎಂದು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಇದು ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಸೃಷ್ಟಿಸಿದ ನಕಲಿ ಪಟ್ಟಿ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು, ಅಧಿಕೃತ ಪಟ್ಟಿ ನಾಳೆ ಪ್ರಕಟವಾಗುವ ಸಾಧ್ಯತೆ ಇದೆ.
ಈ ಪಟ್ಟಿಯಲ್ಲಿ ರಾಯಚೂರಿನಿಂದ ಎನ್.ಎಸ್. ಬೋಸರಾಜ್, ದೇವದುರ್ಗದಿಂದ ರವಿ ಪಾಟೀಲ್, ಲಿಂಗಸೂಗೂರಿನಿಂದ ಆರ್. ರುದ್ರಯ್ಯ, ಸಿಂಧನೂರಿನಿಂದ ಬಾದರ್ಲಿ ಹಂಪನಗೌಡ, ಮಾನ್ವಿಯಿಂದ ಡಾ.ತನುಶ್ರೀ, ಸಿರಗುಪ್ಪದಿಂದ ಮುರಳೀಕೃಷ್ಣ, ಬಳ್ಳಾರಿ ನಗರದಿಂದ ದಿವಾಕರ್ ಬಾಬು, ಕೂಡ್ಲಿಗಿಂದ ರಘು ಗುಜ್ಜಲ್, ಗುರಮಿಠಕಲ್ನಿಂದ ಬಾಬುರಾವ್ ಚಿಂಚನಸೂರ, ಯಾದರಗಿರಿಯಿಂದ ಚನ್ನಾರಡ್ಡಿ ತನ್ನೂರು, ಅಫ್ಜಲಪುರದಿಂದ ಅರುಣ್ಕುಮಾರ್ ಪಾಟೀಲ, ಮೊಳಕಾಲ್ಮೂರು ಕ್ಷೇತ್ರದಿಂದ ಎನ್.ವೈ. ಗೋಪಾಲಕೃಷ್ಣ ಸೇರಿ 50 ಈ ಪಟ್ಟಿಯಲ್ಲಿ ಇವೆ.
ಆದರೆ, ಇದು ಅಧಿಕೃತವಲ್ಲ. ಕೇವಲ ಮುಕುಲ್ ವಾಸ್ನಿಕ್ ಹೆಸರಿನಲ್ಲಿ ಸಹಿ ಮಾಡಿದ ಪಿಡಿಎಫ್ ಪಟ್ಟಿ ಆಗಿದ್ದು, ಅಧಿಕೃತ ಪಟ್ಟಿ ಬಿಡುಗಡೆ ಮಾಡುವ ಸಂಬಂಧ ಗುರುವಾರ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಪ್ರಕಟಿಸಲಾಗುವುದು ಎಂದು ಬಲ್ಲ ಮೂಲಗಳು ದೃಢಪಡಿಸಿವೆ.