ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.6: ಚುನಾವಣೆ ಶಾಂತಿಯುತ ಮತ್ತು ಹೆಚ್ಚು ಮತದಾನ ಆಗುವ ರೀತಿಯಲ್ಲಿ ಆಯೋಗದ ಜೊತೆಗೆ ಮಾಧ್ಯಮದವರೂ ಕೈಜೋಡಿಸಲು ಕೇಂದ್ರ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸಲಹೆ ಮಾಡಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ 16ನೇ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಕುರಿತ ರಾಜ್ಯ ಮಟ್ಟದ ಮಾಧ್ಯಮ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಚುನಾವಣೆಯಲ್ಲಿ ಮಾಧ್ಯಮದ ಪಾತ್ರ ಪ್ರಮುಖವಾಗಿದೆ. ಮುದ್ರಣ ಹಾಗೂ ವಿದ್ಯುನ್ಮಾನ ಮಾದ್ಯಮದವರು, ಚುನಾವಣಾ ಮಾಹಿತಿ ಪ್ರಕಟಿಸುವಾಗ ಮಾದರಿ ನೀತಿ ಸಂಹಿತೆಯನ್ನು ಪಾಲಿಸುವುದರ ಜೊತೆಗೆ ಮತದಾನ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಮಾತನಾಡಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಎಫ್ಐಆರ್ ದಾಖಲಿಸಬಹುದು. ಅಧಿಕಾರದಲ್ಲಿರುವ ಪಕ್ಷ ಮತದಾರರ ಮೇಲೆ ಪರಿಣಾಮ ಬೀರುವಂತಹ ಯೋಜನೆಗಳು, ಹೊಸ ಕಾರ್ಯಕ್ರಮಗಳನ್ನು ಮಾಡಬಾರದು. ಹೊಸ ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮಾಡಬಾರದು. ಸಭೆ ಕರೆಯುವಂತಿಲ್ಲ. ಪಕ್ಷಗಳು ವೈಯಕ್ತಿಕ ನಿಂದನೆ ಮಾಡಬಾರದು. ಅಧಿಕಾರಿಗಳು ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡಬಾರದು. ಪ್ರೊಟೊಕಾಲ್, ಸಭೆಗಳಲ್ಲಿ ಭಾಗವಹಿಸಬಾರದು ಎಂದರು.
ಮುದ್ರಣ ಮಾಧ್ಯಮದ ಇ-ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಅಗತ್ಯ. ರಾಜಕೀಯಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿನ ಅಂಶಗಳು ಮಾಧ್ಯಮ ಪ್ರಮಾಣೀಕರಣ ಮತ್ತು ಪರಿಶೀಲನಾ ಸಮಿತಿಯಿಂದ ಪ್ರಮಾಣಿಕರಿಸಿದ ಜಾಹೀರಾತನ್ನು ಪ್ರಕಟಿಸಬೇಕು ಹಾಗೂ ವಿಡಿಯೊ ವ್ಯಾನ್ ಪ್ರಚಾರಕ್ಕೆ ಕೂಡ ಪ್ರಮಾಣ ಪತ್ರ ಪಡೆಯುವುದು ಅಗತ್ಯ ಎಂದರು.
ಮಾಧ್ಯಮ ವಿಭಾಗದ ವಿಶೇಷ ಅಧಿಕಾರಿ ಸೂರ್ಯಸೇನ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗವು ನಿಗಾ ಇಟ್ಟಿದ್ದು, ಜಾಹೀರಾತುಗಳನ್ನು ಪೂರ್ವಾನುಮತಿ ಪಡೆದು ಪ್ರಸಾರ ಮಾಡಬೇಕೆಂದರು ಎಂದರು.
ಕಾರ್ಯಾಗಾರದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್, ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಚುನಾವಣೆಗಳ ವಿಶೇಷ ಆಯುಕ್ತರಾದ ಉಜ್ವಲ್ ಕುಮಾರ್ ಗೋಷ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಡಿ.ಪಿ.ಮುರಳೀಧರ್ ಹಾಗೂ ಮಾಧ್ಯಮದವರು ಉಪಸ್ಥಿತರಿದ್ದರು.