ಸುದ್ದಿಮೂಲ ವಾರ್ತೆ,
ಕಲಬುರಗಿ, ಏ.8: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರು ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪಕ್ಷದ ವೇದಿಕೆಯಲ್ಲಿ ಇಂತಿಷ್ಟು ಸೀಟುಗಳನ್ನು ಯುವಕರಿಗೆ ನೀಡಬೇಕೆಂದು ವಿನಂತಿಸಲಾಗಿದೆ. ಅದನ್ನು ಬಹಿರಂಗವಾಗಿ ಪ್ರಸ್ತಾಪಿಸುವುದಿಲ್ಲ ಎಂದರು.
ಬಿಜೆಪಿ ಕಳೆದ ವಾರದಿಂದ ಸ್ಪರ್ಧಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಟಿಕೆಟ್ ಯಾರಿಗೆ ನೀಡಬೇಕೆಂಬ ಅಭಿಯಾನದಲ್ಲಿ ಶಕ್ತಿ ಕೇಂದ್ರದ 22 ಸಾವಿರ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತದನಂತರ ಜಿಲ್ಲಾ ಹಾಗೂ ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದೆ. ಈಗ ಏ.10 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿ ಪಟ್ಟಿ ಅಂತೀಮಗೊಳ್ಳಲಿದೆ ಎಂದರು.
ಕಾಂಗ್ರೆಸ್ ಪಕ್ಷ ಬಣಕ್ಕೊಂದು ಟಿಕೆಟ್ ನೀಡಿದ್ದರಿಂದ ಅವರ ಜಗಳ ಬೀದಿಗೆ ಬಂದು ನಿಂತಿದೆ. ಪರಿಣಾಮ ಭಿನ್ನಮತ ಸ್ಪೋಟಗೊಂಡಿದೆ. ಅದೇ ರೀತಿ ಮನೆಯಲ್ಲಿ ಕುಳಿತು ಟಿಕೆಟ್ ಅಂತೀಮಗೊಳಿಸುತ್ತಿದ್ದ ಜೆಡಿಎಸ್ ಪಕ್ಷದಲ್ಲೂ ಭಿನ್ನ ಹಾದಿ ಹಿಡಿದಿದೆ. ಆದರೆ ಬಿಜೆಪಿ ಹಾಗಿಲ್ಲ. ಕೆಳ ಹಂತದ ಕಾರ್ಯಕರ್ತರನ್ನು ಗುರುತಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಅದಕ್ಕೆ ತಾವೊಬ್ಬರು ಉದಾಹರಣೆ. ತಾವು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದನಾಗಿರುವುದೇ ಸಾಕ್ಷಿ ಎಂದು ಹೇಳಿದರು.
ಬಿಜೆಪಿ ಚುನಾವಣೆ ಸಂಬಂಧ ಯಾವುದೇ ರಣತಂತ್ರ ರೂಪಿಸುವುದಿಲ್ಲ. ಯಾಕೆಂದರೆ ಸದಾ ಜನರೊಂದಿಗಿರುವ ಬಿಜೆಪಿಗೆ ರಣತಂತ್ರ ರೂಪಿಸುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವೇ ರಣತಂತ್ರ ರೂಪಿಸಬೇಕಾಗಿದೆ ಎಂದು ವ್ಯಂಗ್ಯವಾಡಿದರು.