ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.8: ಉದ್ಯಾನನಗರಿಯ ಸಾಂಸ್ಕೃತಿಕ, ಐತಿಹಾಸಿಕ ಹಬ್ಬ ಕರಗ ಶಕ್ತ್ಯೋತ್ಸವ ಸಾಂಗವಾಗಿ ನೆರೆದಿದ್ದು, ಹಲವು ಸಾವಿರ ಭಕ್ತರು ರಾತ್ರಿಯ ಕರಗದ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ.
ತಿಗರಳಪೇಟೆ, ನಗರ್ತರಪೇಟೆ, ಕಬ್ಬನ್ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆ ಸೇರಿದಂತೆ ಶಕ್ತ್ಯೋತ್ಸವ ಸಾಗುವ ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಜನ ಸಾಗರವೇ ನೆರೆದಿತ್ತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗಡೆಯವರು ಕರಗ ಶಕ್ತ್ಯೋತ್ಸವದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸಿದರು. ನಿನ್ನೆ ರಾತ್ರಿ 12.30 ಗಂಟೆಗೆ ಕರಗ ಹೊರಡಬೇಕಿತ್ತು. ಕಣ ಪೂಜೆ, ಇತರೆ ವಿಧಿವಿಧಾನಗಳು ತಡವಾದ ಹಿನ್ನಲೆಯಲ್ಲಿ ಕರಗ ತಡವಾಗಿ ಹೊರಟಿತು. ನಿನ್ನೆ ತಡರಾತ್ರಿ 2 ಗಂಟೆಗೆ ಹೊರಟ ಕರಗವು ನಗರದ ನಾನಾ ಭಾಗಗಳಲ್ಲಿ ಇಂದು ಬೆಳಗಿನ ಜಾವದವರೆಗೆ ಸಾಗಿ ಭಕ್ತರನ್ನು ಪುನೀತಗೊಳಿಸಿತು. ಇಂದು ಬೆಳಗ್ಗೆ ಅಂದಾಜು 9 ಗಂಟೆ ವೇಳೆಗೆ ಮತ್ತೆ ಹಿಂದಿರುಗಿ ಮೂಲ ಸ್ಥಾನ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಕರಗ ತಲುಪಿತು.
ತಿಗಳರಪೇಟೆ ಹಾಗೂ ಸುತ್ತಮುತ್ತಲ ನಾನಾ ಭಾಗದ ಜನರು ಸೇರಿದಂತೆ ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ ಸೇರಿದಂತೆ ವಿವಿಧೆಡೆಯಿಂದ ಭಕ್ತ ಸಾಗರವೇ ಹರಿದುಬಂದಿತ್ತು.
ಕಳೆದ ಒಂದೆರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಕರಗ ಶಕ್ತ್ಯೋತ್ಸವದಲ್ಲಿ ಭಾಗವಹಿಸಿದ್ದರು. ದೇಗುಲದ ಆವರಣದಲ್ಲಿ ಭಕ್ತರು ಕಿಕ್ಕಿರಿದು ನೆರೆದಿದ್ದರು. ತಿಗಳ ಸಮುದಾಯದ ಅರ್ಚಕರಾದ ವಿ.ಜ್ಞಾನೇಂದ್ರ ಅವರು ಸುಮಾರು 40 ಕೆ.ಜಿ ತೂಕದ (ಬೆಳ್ಳಿ ಮಿಶ್ರಿತ ಲೋಹ) ಕಿರೀಟ ಹೊತ್ತು ರಾತ್ರಿಯಿಡಿ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು.
ಕರಗ ಶಕ್ತ್ಯೋತ್ಸವದ ಮೆರವಣಿಗೆಯು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಳದಿಂದ ಹೊರಟು ಹಲಸೂರುಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀರಾಮ ದೇವಾಲಯ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಭೇಟಿ ನೀಡಿದೆ. ನಗರ್ತಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಭೈರೇದೇವರ ದೇವಾಲಯದ ಮಾರ್ಗವಾಗಿ ಕಬ್ಬನ್ ಪೇಟೆಯ ಶ್ರೀರಾಮಸೇವಾ ಮಂದಿರ, 15ನೇ ಗಲ್ಲಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿದೆ.
ಮಕ್ಕಳ ಬಸವಣ್ಣ ಗುಡಿ, ಗಾಣಿಗರ ಪೇಟೆ ಚೆನ್ನರಾಯಸ್ವಾಮಿ ದೇವಸ್ಥಾನದಿಂದ ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ರಾಣಾಸಿಂಗ್ ಪೇಟೆ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಬಳೇಪೇಟೆ, ಅಣ್ಣಮ್ಮ ದೇವಸ್ಥಾನ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕುಂಬಾರ ಪೇಟೆ, ಕಬ್ಬನ್ಪೇಟೆ ಮಾರ್ಗವಾಗಿ ಪುನಃ ತಿಗಳರಪೇಟೆಗೆ ಕರಗ ಹಿಂದಿರುಗಿತು.