ಸುದ್ದಿಮೂಲ ವಾರ್ತೆ
ತುಮಕೂರು, ಏ.8: ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ದಕ್ಷತೆಯಿಂದ ನಡೆದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ನಿವೃತ್ತ ಸರ್ಕಾರಿ ನೌಕರರು ಇಂದು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಮತದಾನದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇ 10ರಂದು ನಡೆಯುವ ಮತದಾನದ ದಿನದಂದು ಎಲ್ಲಾ
ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಜಿಲ್ಲೆಯ ಮತದಾನದ ಶೇಕಡಾವಾರು ಪ್ರಮಾಣ ನೂರರಷ್ಟು ತಲುಪುವಂತೆ ಮಾಡಬೇಕು ಎಂದು ಹೇಳಿದರು.
ಹಿಂದಿನ ಚುನಾವಣೆಗಳ ಮತದಾನದ ಶೇಕಡಾವಾರು ಪ್ರಮಾಣವನ್ನು ನೋಡಿದಾಗ ಗ್ರಾಮೀಣ ಭಾಗದಲ್ಲಿ ಎಲ್ಲಾ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ನಗರ ಭಾಗದಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಜಿಲ್ಲೆಯ ಶೇಕಡಾ ಪ್ರಮಾಣ ಕಡಿಮೆ ಆಗುತ್ತಿದೆ ಎಂದರಲ್ಲದೆ, ಯುವ ಮತದಾರರು
ಕಡ್ಡಾಯವಾಗಿ ಮತ ಚಲಾಯಿಸುವಂತೆ ಅವರಲ್ಲಿ ಅರಿವು ಮೂಡಿಸಿ ಯಾವೊಬ್ಬ ಮತದಾರನೂ ಮತದಾನದಿಂದ ಹೊರಗುಳಿಯಬಾರದು ಎಂದು ಹೇಳಿದರು.
ಯಾವುದೇ ವ್ಯಕ್ತಿಯು ಆಸೆ, ಆಮಿಷಗಳಿಗೆ ಬಲಿಯಾಗದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಮತದಾನದ ಕುರಿತು ಎಲ್ಲಾ ಮತದಾರರಿಗೆ ಸ್ವೀಪ್ನಿಂದ ಹಲವಾರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.