ಸುದ್ದಿಮೂಲ ವಾರ್ತೆ
ನವದೆಹಲಿ, ಏ.9: ನಂದಿನಿ ನಂಬರ್ ಒನ್ ಬ್ರ್ಯಾಂಡ್ ಆಗಲಿದ್ದು, ಅಮುಲ್ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಭ್ಯರ್ಥಿಗಳ ಬಗ್ಗೆ ಚರ್ಚೆ
ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳ ವಿಚಾರ ಚರ್ಚೆ ಮಾಡಲಾಗುವುದು. ನಾಳೆ ಸಂಜೆ ಐದು ಗಂಟೆಗೆ ಸಂಸದಿಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಎಲ್ಲಾ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.
ಕೆಲ ಎಂಎಲ್ ಸಿ ಮತ್ತು ಸಂಸದರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಚರ್ಚೆಯ ಬಳಿಕ ಎಷ್ಟು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ನಿರ್ಧಾರವಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆಯ ಗೊಂದಲದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,
ನಮ್ಮ ಶಕ್ತಿ ಮೇಲೆ ನಮಗೆ ನಂಬಿಕೆ ಇದೆ. ಸಹಜವಾಗಿಯೇ ಅದರ ಲಾಭ ಆಗಲಿದೆ ಎಂದರು.
ಕಾಂಗ್ರೆಸ್ಗೆ ನಡುಕ ಹುಟ್ಟಿದೆ
ನಟ ಸುದೀಪ್ ಬಿಜೆಪಿ ಬೆಂಬಲ ನೀಡುವ ಬಗ್ಗೆ ಮಾತನಾಡಿ,
ಕಾಂಗ್ರೆಸ್ ಈ ಹಿಂದೆ ನಟರನ್ನು ಕರೆ ತಂದು ಚುನಾವಣಾ ಪ್ರಚಾರ ಮಾಡಿದ್ದಾರೆ. ಅಂಬರೀಶ್ ಪ್ರಚಾರ ಮಾಡಲಿಲ್ಲವೇ,ಶಾಸಕರಾಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿಗೆ ಬೆಂಬಲ ನೀಡುವ ಮುಂಚೆ ಅದರಿಂದಾಗೊ ಎಲ್ಲಾ ಪರಿಣಾಮದ ಬಗ್ಗೆ ಮಾಹಿತಿ ಇದೆ. ಸುದೀಪ್ ಅವರು ನಮಗೆ ಬೆಂಬಲ ನೀಡಿರುವುದರಿಂದ ಸಹಜವಾಗಿ ಕಾಂಗ್ರೆಸ್ ಗೆ ನಡುಕ ಹುಟ್ಟಿದೆ ಎಂದರು.
ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಆ ತರಹದ ಲೆಕ್ಕಾಚಾರ ಚರ್ಚೆಯಲ್ಲಿ ಮಾಡಿದಾಗಲೇ ತಿಳಿಯುವುದು ಎಂದರು.