ಸುದ್ದಿಮೂಲ ವಾರ್ತೆ
ಮಂಡ್ಯ, ಏ.8: ರಾಜ್ಯದಲ್ಲಿ ಅಮುಲ್ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿದಲ್ಲಿ ಇಲ್ಲಿನ ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗಲಿದೆ. ಅಲ್ಲದೆ, ಇದನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ರೈತರ ಬದುಕಿಗೆ ಹೊಡೆತ ಬೀಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಎಂಎಫ್ ಹಾಗೂ ಅದರಡಿಯ ಎಲ್ಲ ಒಕ್ಕೂಟಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಕವಾಶ ನೀಡಬೇಕು. ಯಾವುದೇ ಕಾರಣಕ್ಕೂ ಅಮುಲ್ನೊಂದಿಗೆ ವಿಲೀನ ಅಥವಾ ಬೇರೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯೊಂದರಲ್ಲೇ 1277 ಹಾಲು ಉತ್ಪಾದಕ ಸಹಕಾರ ಸಂಘಗಳಿವೆ. ಅದರಲ್ಲಿ 777 ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. 1. 5 ಲಕ್ಷ ರೈತರು ಸಹಕಾರ ಸಂಘಗಳ ಮೂಲಕ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದ್ದಾರೆ. ಪ್ರತಿ ದಿನ 8.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಅಮುಲ್ ಉತ್ಪನ್ನಗಳು ರಾಜ್ಯದ ಮಾರುಕಟ್ಟೆಗೆ ಬಂದರೆ ರೈತರ ಅಸ್ಮಿತೆಗೆ ಹೊಡೆತ ಬೀಳುತ್ತಿದೆ ಎಂದಿದ್ದಾರೆ.
ಕೆಎಂಎಫ್ ರಾಜ್ಯದ ಹೆಮ್ಮೆಯ ಸಂಸ್ಥೆ, ರಾಜ್ಯದ ಅಸ್ಮಿತೆ. ಲಕ್ಷಾಂತರ ಕೃಷಿಕರು, ಕೃಷಿ ಕೂಲಿಕಾರರ ಬದುಕಿಗೆ ಈ ಸಂಸ್ಥೆ ಬೆಳಕಾಗಿದೆ. ಹಾಲನ್ನು ಖರೀದಿಸುವ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಈ ಮೂಲಕ ಕೃಷಿಗೂ ಸಹಕಾರಿಯಾಗಿದೆ. ಮಾತ್ರವಲ್ಲ, ರಾಜ್ಯದ ಕೋಟ್ಯಂತರ ಜನರ ಹಾಲು ಹಾಗೂ ಹಾಲಿನ ಬೇಡಿಕೆಗಳನ್ನು ಈಡೇರಿಸುತ್ತಿದೆ. ಅಲ್ಲದೆ, ಜನರಿಗೆ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ನೀಡುವ ಮೂಲಕ ಹೊರ ರಾಜ್ಯಗಳಲ್ಲೂ ಪ್ರಸಿದ್ಧವಾಗಿದೆ ಎಂದಿದ್ದಾರೆ.
ಕೆಎಂಎಫ್ನಿಂದ ರಾಜ್ಯದ ಲಕ್ಷಾಂತರ ಕೃಷಿಕರು, ಕೃಷಿ ಕೂಲಿಕಾರರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ, ಪ್ರತಿ ತಿಂಗಳ ಜೀವನ ನಿರ್ವಹಣೆಗೆ ಹಾಲು ಮಾರಾಟದ ಹಣ ನೆರವಾಗುತ್ತಿದೆ. ಇದರಿಂದ ಮಹಿಳೆಯರಿಗೆ ಉದ್ಯೋಗ ಸಿಕ್ಕಿದೆ. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ದೊರೆಯಲು ಕೆಎಂಎಫ್ ಪ್ರಮುಖ ಕಾರಣವಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಪೈಪೋಟಿ ಹೆಸರಿನಲ್ಲಿ ಇಂತಹ ಕ್ರಮಗಳನ್ನು ಕೈಗೊಂಡರೆ ರೈತರ ಜೀವನಕ್ಕೆ ಕೊಳ್ಳಿ ಇಟ್ಟಂತಾಗುತ್ತದೆ. ಹೀಗಾಗಿ ಇಂತಹ ಯಾವುದೇ ಪ್ರಯತ್ನಗಳಿಗೂ ಅವಕಾಶವನ್ನು ಮಾಡಿಕೊಡಬಾರದು ಎಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.