ಕಲಬುರಗಿ: ವಿಧಾನಸಭಾ ಚುನಾವಣೆಯ ಜೇವರ್ಗಿ ಮತಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಧರ್ಮಣ್ಣ ದೊಡ್ಡಮನಿ ಗಂವ್ಹಾರ ಅವರಿಗೆ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಬಿಜೆಪಿ ಮುಖಂಡ ಬಸವರಾಜ್ ಮದ್ರಕಿ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 33 ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಶಿಸ್ತಿನ ಸಿಪಾಯಿಯಾಗಿ ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನು ದೊಡ್ಡಮನಿ ಅವರು ನಿಭಾಯಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕು ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.
ಧರ್ಮಣ್ಣ ದೊಡ್ಡಮನಿ ಅವರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಅವಧಿಗೆ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷರಾಗಿ, ರಾಜ್ಯ ಪರಿಷತ್ ಸದಸ್ಯರಾಗಿ, ಎರಡು ಅವಧಿಗೆ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ, ಪ್ರಸ್ತುತ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿರಾಗಿರುತ್ತಾರೆ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದರೆ ಅವರ ಗೆಲುವು ಶತಸಿದ್ಧ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಾರಾಧ್ಯ ಬಡಿಗೇರ್, ದೇವೇಂದ್ರ ದೊರಿ, ಸಂತೋಷ್ ಮಲ್ಲಬಾದ್, ಶಂಕರಲಿಂಗ ಕಿರಕಿಹಳ್ಳಿ ಇದ್ದರು.