ಸುದ್ದಿಮೂಲವಾರ್ತೆ
ಗಂಗಾವತಿ,ಏ.೯- ಗಂಗಾವತಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಮ್ಮ ಕೈ ತಪ್ಪುತ್ತಿರುವುದಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್. ಆರ್. ಶ್ರೀನಾಥ್ ಇದೆ. ೧೯ರ ನಂತರ ತಮ್ಮ ಮುಂದಿನ ರಾಜಕೀಯ ನಡೆ ಪ್ರಕಟಿಸುವುದಾಗಿ ಹೇಳಿಕೆ ನೀಡಿದ್ದರ ಹಿನ್ನೆಲೆ ಕಳೆದ ಶನಿವಾರ ಗಂಗಾವತಿ ಬಿಜೆಪಿ ಹಾಲಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಪ್ರತ್ಯೇಕವಾಗಿ ಶ್ರೀನಾಥ್ರ ನವಾಸಕ್ಕೆ ಭೇಟಿ ನೀಡಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಮತ್ತು ಚುನಾವಣೆಯಲ್ಲಿ ತಮಗೆ ಬೆಂಬಲಿಸುವಂತೆ ಕೋರಿದ್ದಾರೆಂದು ತಿಳಿದಿದೆ.
ಪ್ರಸಕ್ತ ಚುನಾವಣೆ ರಾಜಕೀಯ ವಿದ್ಯಮಾನ ಕುರಿತು ಶಾಸಕ ಪರಣ್ಣ ಮುನವಳ್ಳಿ ಶ್ರೀನಾಥರೊಂದಿಗೆ ಸುಮಾರು ಒಂದು ಗಂಟೆವರೆಗೆ ರಹಸ್ಯವಾಗಿ ಸುರ್ಧೀರ್ಘ ಮಾತುಕತೆ ನಡೆಸಿ ಬಿಜೆಪಿ ಪಕ್ಷಕ್ಕೆ ಸೇರಲು ಆಹ್ವಾನಿಸಿದ್ದಾರೆ. ಒಂದು ವೇಳೆ ಪಕ್ಷಕ್ಕೆ ಸೇರದಿದ್ದರೂ ಚುನಾವಣೆಯಲ್ಲಿ ತಮಗೆ ಬೆಂಬಲಿಸುವಂತೆಯೂ ಮನವಿ ಮಾಡಿದ್ದಾರೆಂದು ಗೊತ್ತಾಗಿದೆ.
ಗಾಲಿ ಜನಾರ್ಧನರೆಡ್ಡಿ ಕೂಡ ಶ್ರೀನಾಥ್ರ ನಿವಾಸಕ್ಕೆ ಭೇಟಿ ನೀಡಿ ಮಾಜಿ ಸಂಸದ ಎಚ್. ಜಿ. ರಾಮುಲು ಅವರ ಆರೋಗ್ಯ ವಿಚಾರಿಸಿ ಬಳಿಕ ಹೆಚ್.ಆರ್. ಶ್ರೀನಾಥ್ ಜ್ಯೊತೆ ಗುತ್ತವಾಗಿ ಮಾತುಕತೆ ನಡೆಸಿ ತಮ್ಮ ಪಕ್ಷಕ್ಕೆ ಸೇರುವಂತೆ ಇಲ್ಲವೇ ಈ ಚುನಾವಣೆಯಲ್ಲಿ ತಮಗೆ ಬೆಂಬಲಿಸು ಕೋರಿದ್ದಾರೆಂದು ತಿಳಿದು ಬಂದಿದೆ.
ಶ್ರೀನಾಥ್ ಮಾತ್ರ ಈ ಇಬ್ಬರೂ ನಾಯಕರಿಗೆ ಸಕರಾತ್ಮಕವಾಗಿ ಸ್ಪಂದಿಸಿ ಈಗೇನು ನನ್ನ ಅಚಲ ನಿರ್ಧಾರ ತಿಳಿಸಲಾರೆ ಈ ತಿಂಗಳ ೨೦ರ ನಂತರ ಮುಂದಿನ ನನ್ನ ರಾಜಕೀಯ ನಡೆ ತಿಳಿಸುವೆ ಎಂದು ಶ್ರೀನಾಥ್ ತಿಳಿಸಿದ್ದಾರೆಂದು ಗೊತ್ತಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ ದ್ವಿತೀಯ ಪಟ್ಟಿಯಲ್ಲಿ ಗಂಗಾವತಿ ಕ್ಷೇತ್ರದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೆಸರು ಘೋಷಿಸಿದ್ದ ದಿನವೇ ಹೆಚ್.ಆರ್. ಶ್ರೀನಾಥ್ ಈ ಪಕ್ಷದ ಹೈಕಮಾಂಡ್ ವಿರುದ್ಧ ಮುನಿಸಿಕೊಂಡು, ಮಾಜಿ ಸಿಎಂ ಸಿದ್ಧರಾಮಯ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದನ್ನು ಗಮನಿಸಿದ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನರೆಡ್ಡಿ ಈ ಮೂವರೂ ಒಂದೇ ದಿನ ಪ್ರತ್ಯೇಕವಾಗಿ ಶ್ರೀನಾಥ್ ಮನೆ ಭೇಟಿ ನೀಡಿ ಮುಂದೆ ರಾಜಕೀಯವಾಗಿ ಇವರ ಬೆಂಬಲ ಪಡೆಯಲು ಮುಂದಾಗಿದ್ದು, ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.