ಸುದ್ದಿಮೂಲ ವಾರ್ತೆ
ಕೆಜಿಎಫ್, ಏ, 9: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿಕೊಂಡು ಬಂದವರು ಮತ್ತು ಈ ವಿಧಾನಸಭಾ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಿಜೆಪಿ ಶಾಸಕ ವೈ.ಸಂಪಂಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.
ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀಲ್ ಕುಮಾರ್, ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷ ವಿಜಿಕುಮಾರ್, ಮೈನರಿಟಿ ಮೋರ್ಚಾ ಅಧ್ಯಕ್ಷ ಕುನ್ನು,ಎಸ್.ಸಿ ಮೋರ್ಚಾ ಅಧ್ಯಕ್ಷ ಬುಚೆಪಲ್ಲಿ ಕೃಷ್ಣಮೂರ್ತಿ ಮುಂತಾದವರು ಪತ್ರಿಕಾಗೋಷ್ಠಿ ನಡೆಸಿ ಈ ಒತ್ತಾಯ ಮಾಡಿದರು.
ಅಂದಿನ ದಿನಗಳಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರವು ವಿಭಜನೆ ಬಳಿಕ ಮೀಸಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆದ ಸಂಪಂಗಿ ಅವರು ಮೊದಲ ಪ್ರಯತ್ನದಲ್ಲಿಯೇ ಜಯ ಗಳಿಸಿದ್ದರು. ನಂತರ 2013 ರಲ್ಲಿ ತಮ್ಮ ತಾಯಿ ವೈ.ರಾಮಕ್ಕ ಅವರನ್ನು ಶಾಸಕರಾಗಿ ಮಾಡುತ್ತಾರೆ. ಅನೇಕ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಜಯಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲಿ ತಮ್ಮದೇ ಬೆಂಬಲಿಗರನ್ನು ಹೊಂದಿದ್ದಾರೆ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಅವರಿಗೆ ಪಕ್ಷದ ಬಿ.ಫಾರಂ ನೀಡಿದರೆ ನಾವೆಲ್ಲರೂ ಸೇರಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು ಬೇತಮಂಗಲ ಕ್ಷೇತ್ರದಲ್ಲಿ ನಿರ್ಮಲ ಅಂಬರೀಶ್, ಕ್ಯಾಸಂಬಳ್ಳಿ ಕ್ಷೇತ್ರದಲ್ಲಿ ಜಯಪ್ರಕಾಶ್ ನಾಯ್ಡು, ಪರಾಂಡಹಳ್ಳಿ ಕ್ಷೇತ್ರದಲ್ಲಿ ಅಶ್ವಿನಿ ಸಂಪಂಗಿ ಸೇರಿ ಒಟ್ಟು ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗಳನ್ನು ಮಾಜಿ ಶಾಸಕ ವೈ.ಸಂಪಂಗಿ ಅವರು ಗೆಲ್ಲಿಸಿದರು ಎಂದು ಸುನೀಲ್ ಕುಮಾರ್ ತಿಳಿಸಿದರು.
ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ನಿರಂತರವಾಗಿ ಜನರ ಸೇವೆ ಮಾಡುತ್ತ ಸ್ಥಳೀಯವಾಗಿ ಪಕ್ಷವನ್ನು ಸಂಘಟನೆ ಮಾಡುತ್ತಿರುವ ಸುಮಾರು ಅಭ್ಯರ್ಥಿಗಳು ಇದ್ದಾರೆ. ಆದ್ದರಿಂದ ಪಕ್ಷವು ಅದನ್ನು ಗಮನಿಸಿ ಸ್ಥಳೀಯ ಅಭ್ಯರ್ಥಿಗಳಾದ ಕೂಡಾ ಅಧ್ಯಕ್ಷೆ ಅಶ್ವಿನಿ ಸಂಪಂಗಿ, ಮೋಹನ್ ಕೃಷ್ಣ, ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಸುರೇಶ್, ಮಹದೇವಪುರ ಚಲಪತಿ,ಕೆಜಿಎಫ್ ನಗರ ಭಾಗದಲ್ಲಿ ಸೇರಿದಂತೆ ಉತ್ತಮವಾದ ನಾಯಕರು ಇದ್ದರೆ ಅಂತವರಿಗೆ ಅವಕಾಶವನ್ನು ನೀಡಬೇಕು ಎಂದು ಹೇಳಿದರು.