ಸುದ್ದಿಮೂಲವಾರ್ತೆ
ಕೊಪ್ಪಳ ಏ ೧೦: ಸುಮಾರು ೬ ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ. ಈ ಗ್ರಾಮಕ್ಕೆ ಕುಡಿಯುವ ನೀರನದೆ ದೊಡ್ಡ ಸಮಸ್ಯೆ. ನೀರಿಗಾಗಿ ಇಲ್ಲಿಯ ಪರದಾಡುತ್ತಿದ್ದಾರೆ. ತುಂಗಭದ್ರಾ ನದಿಯಿಂದ ನೀರು ತರಲು ಯೋಜನೆ ಕಾಮಗಾರಿ ಆಮೆವೇಗದಲ್ಲಿ ನಡೆದಿದೆ. ಕೇವಲ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಈ ಗ್ರಾಮಕ್ಕೆ ನೀರು ಬರುತ್ತದೆ. ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಗ್ರಾಮಕ್ಕೆ ನೀರು ಬರುತ್ತಿಲ್ಲ. ಇದರಿಂದ ಬೇಸತ್ತ ಜನ ಈಗ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.
ಕೊಪ್ಪಳ ತಾಲೂಕಿನ ಬಿಸರಳ್ಳಿ ದೊಡ್ಡ ಗ್ರಾಮ. ಬಿಸರಳ್ಳಿಯಲ್ಲಿ ಅಂತರ್ಜಲ ಸಂಪೂರ್ಣವಾಗಿ ಫ್ಲೋರೈಡ್ ಯುಕ್ತವಾಗಿದೆ. ಈ ನೀರು ಬಳಕೆಗೂ ಸಹ ಬರುತ್ತಿಲ್ಲ. ಕುಡಿವ ನೀರಿಗಾಗಿ ಜನ ನಿತ್ಯ ಪರದಾಡುವಂತಾಗಿದೆ. ಕುಡಿಯುವ ನೀರಿಗಾಗಿ ಮಹಿಳೆ ಆಗಾಗ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತಿರುತ್ತಾರೆ. ಎಷ್ಟೆ ಹೋರಾಟ ಮಾಡಿದರೂ ಅಧಿಕಾರಿಗಳು ಇತ್ತ ನೋಡಿಲ್ಲ. ಇದರಿಂದ ಬೇಸತ್ತು ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ.
ಮತ ಕೇಳಲು ಬರುವ ರಾಜಕಾರಣಿಗಳು ಬೇಗನೆ ನೀರು ಕೊಡುತ್ತೇವೆ ಎಂದು ಭರವಸೆ ನೀಡುತ್ತಾ ಬಂದಿದ್ದಾರೆ. ಈ ಭರವಸೆ ಕೇಳಿ ಕೇಳಿ ಸಾಕಾಗಿರುವ ಗ್ರಾಮಸ್ಥರು ನೀವು ಯಾವಾಗ ನೀರು ಕೊಡ್ತೀರಿ ಆಗ ನಾವು ವೋಟು ಹಾಕುತ್ತೀವಿ ಎಂದು ಪಟ್ಟು ಹಿಡಿದಿದ್ದಾರೆ.
ಬಿಸರಳ್ಳಿ, ಬಿಕನಳ್ಳಿ ಹಾಗು ಮೈನಳ್ಳಿ ಗ್ರಾಮಗಳಿಗೆ ೧.೫೦ ಕೋಟಿ ರೂಪಾಯಿಯಲ್ಲಿ ಕುಡಿವ ನೀರಿನ ಯೋಜನೆ ಮಂಜೂರಾಗಿ ೬ ವರ್ಷವಾಗಿದೆ. ಆರು ವರ್ಷವಾದರೂ ಈ ಮೂರು ಹಳ್ಳಿಗೆ ಕುಡಿವ ನೀರು ಬಂದಿಲ್ಲ. ಗ್ರಾಮದಲ್ಲಿ ಟ್ಯಾಂಕ್, ಪೈಪ್ ಲೈನ್ ಸಂಪೂರ್ಣವಾಗಿದೆ. ಈಗ ನೀರು ಸಂಗ್ರಹವಾಗಿರುವ ಸಂಪ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಅದಕ್ಕೆ ೨೬ ಲಕ್ಷ ರೂಪಾಯಿ ಠೆವಣಿಯನ್ನು ಗುತ್ತಿಗೆದಾರರು ಮಾಡಬೇಕಿದೆ. ಗುತ್ತಿಗೆದಾರ ಹಾಗು ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ವಿದ್ಯುತ್ ಸಂಪರ್ಕವಿಲ್ಲದೆ ಕುಡಿವ ನೀರು ಸಿಗುತ್ತಿಲ್ಲ. ಕುಡಿವ ನೀರು ಕೊಡದೆ ಹೊರತು ಬಿಸರಳ್ಳಿ ಗ್ರಾಮಸ್ಥರು ಮತದಾನ ಮಾಡದೆ ಇರಲು ನಿರ್ಧರಿಸಿದ್ದಾರೆ. ಇದಕ್ಕೆ ಗ್ರಾಮ ಪಂಚಾಯತ್ ಸದಸ್ಯರು ಸಹ ಸಹಮತ ನೀಡಿದ್ದು. ನೀರು ಕೊಡುವವರಿಗೂ ಮತ ಕೇಳಲು ಯಾವ ರಾಜಕಾರಣಿಗಳು ನಮ್ಮೂರಿಗೆ ಬರಬೇಡಿ ಎನ್ನುತ್ತಿದ್ದಾರೆ.
ಜನರ ಬೇಡಿಕೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಜನಪ್ರತಿನಿಧಿಗಳಿಗೆ ಈಗ ಪಾಠ ಕಲಿಸಲು ಮತದಾರ ಸಿದ್ದವಾಗಿದ್ದಾನೆ. ಈ ಮಧ್ಯೆ ಇಂದು ತಹಸೀಲ್ದಾರ ನೇತ್ರತ್ವದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮಸ್ಥರ ಸಭೆಯನ್ನು ನಡೆಸಲಾಯಿತು. ಈಗಲೇ ವಿದ್ಯುತ್ ಸಂಪರ್ಕ ಕಾಮಗಾರಿ ಆರಂಭಿಸಿ ಕುಡಿವ ನೀರು ನೀಡುವ ಭರವಸೆ ನೀಡಿದರು. ಆದರೆ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ನೀರು ಬರುವವರೆಗೂ ನಾವು ಮತದಾನ ಬಹಿಷ್ಕಾರದಿಂದ ದೂರು ಇರುತ್ತೇವೆ. ಒಂದು ವೇಳೆ ಚುನಾವಣೆಯ ಮುನ್ನ ನೀರು ಬಂದರೆ ಬಹಿಷ್ಕಾರ ಹಿಂಪಡೆಯುತ್ತೇವೆ ಎಂದು ಪಟ್ಟು ಹಿಡಿದು ಸಭೆಯಿಂದ ಹೊರ ಬಂದಿದ್ದಾರೆ.