ನವದೆಹಲಿ, ಏ.10: ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಸಂಬಂಧ ದೆಹಲಿಯಲ್ಲಿ ಕಾಂಗ್ರೆಸ್ ಉನ್ನತ ನಾಯಕರ ಚರ್ಚೆ ನಡೆದಿದ್ದು, ಟಿಕೆಟ್ ಹಂಚಿಕೆ ಸಂಬಂಧ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ದೆಹಲಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸೋಮವಾರ ರಾತ್ರಿ ಮಹತ್ವದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಖರ್ಗೆ, ರಾಹುಲ್ಗಾಂಧಿ, ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಾತ್ರ ಇದ್ದರು ಎನ್ನಲಾಗಿದೆ.ಮೊದಲ ಪಟ್ಟಿಯಲ್ಲಿ 120 ಕ್ಷೇತ್ರಗಳಿಗೆ ಮತ್ತು ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಈಗ ಬಾಕಿ ಇರುವ 58 ಕ್ಷೇತ್ರಗಳಿಗೆ ಮೂರನೇ ಪಟ್ಟಿ ಬಿಡುಗಡೆ ಕಾಂಗ್ರೆಸ್ಗೆ ಸವಾಲಿನ ವಿಷಯವಾಗಿದೆ. ಆದರೂ ಸಹ ಅಳೆದು, ತೂಗಿ ಅಂತಿಮಗೊಳಿಸುವ ಮೂಲಕ ಬಹುತೇಕ ಬುಧವಾರದೊಳಗೆ ತನ್ನ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.
ಕಾಂಗ್ರೆಸ್ನ ಮೊದಲೆರಡು ಪಟ್ಟಿಗಳನ್ನು ಚುನಾವಣಾ ಸ್ಕ್ರೀನಿಂಗ್ ಕಮಿಟಿ ಮೂಲಕ ಅಂತಿಮಗೊಳಿಸಲಾಗಿತ್ತು . ಇದರಲ್ಲಿ ಕರ್ನಾಟಕದಿಂದ ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಪರಮೇಶ್ವರ್, ಬಿ.ಕೆ. ಹರಿಪ್ರಸಾದ್ ಸಹಿತ ಹಲವರು ಇದ್ದರು. ಆದರೆ, ಮೂರನೇ ಪಟ್ಟಿ ಸಂಬಂಧ ಸ್ಕ್ರೀನಿಂಗ್ ಕಮಿಟಿಯ ಉಪಸಮಿತಿಯೊಂದನ್ನು ರಚಿಸಲಾಗಿದೆ. ಇದರಲ್ಲಿ ಕರ್ನಾಟಕದಿಂದ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ ಮಾತ್ರ ಸ್ಥಾನ ನೀಡಲಾಗಿದೆ. ಉಳಿದವರನ್ನು ಕೈಬಿಡಲಾಗಿದೆ.