ಸುದ್ದಿಮೂಲ ವಾರ್ತೆ ,
ರಾಯಚೂರು ಏ.೧೧ : ಹಿಂದುಳಿದ ಹಾಗೂ ಮಹಾತ್ವಾಕಾಂಕ್ಷಿ ಜಿಲ್ಲೆಯಾದ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಆಗ್ರಹಿಸಿ ಸುಮಾರು 384 ದಿನದಿಂದ ನಡೆಯುತ್ತಿರುವ ಹೋರಾಟ 84 ದಿನಗಳ ಸರದಿ ಉಪವಾಸ ಸತ್ಯಾಗ್ರಹದ ಮೂಲಕ ಏಮ್ಸ್ ಹೋರಾಟದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿಮಾಡಲಾಗಿದೆ. ಆದರೇ ಬಿಜೆಪಿ ಸರ್ಕಾರ ಬರೀ ಸುಳ್ಳು ಹೇಳುವ ಮೂಲಕ ಜನರನ್ನು ಮೋಸ ಮಾಡುತ್ತಿದೆ. ಹಾಗಾಗಿ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ರಾಯಚೂರಿಗೆ ಏಮ್ಸ್ ಭರವಸೆ ನೀಡುವಂತೆ ಎಐಸಿಸಿ ಕಾರ್ಯದರ್ಶಿ ಎನ್ಎಸ್ ಬೋಸರಾಜು ಹಾಗೂ ರವಿ ಬೋಸರಾಜು ಅವರು ರಾಹುಲ್ ಗಾಂದಿ ಅವರೊಂದಿಗೆ ಚರ್ಚಿಸಿ ಮನವಿ ಮಾಡಿದ್ದಾರೆ.
ದೆಹಲಿಯ ರಾಹುಲ್ ಗಾಂದಿ ನಿವಾಸದಲ್ಲಿ ಎಐಸಿಸಿ ಕಾರ್ಯದರ್ಶಿ ಎನ್ಎಸ್ ಬೋಸರಾಜು ಅವರು ರಾಹುಲ್ಗಾಂದಿಯವರೊಂದಿಗೆ ಸುಧೀರ್ಘ ವಾಗಿ ಚರ್ಚಿಸಿ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ಎಲ್ಲಾ ಮೂಲ ಸಂಪನ್ಮೂಲಗಳಿದ್ದರು ಕಡೆಗಣಿಸಲಾಗುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಯಚೂರಿನ ಜನತೆ ಮನವಿ ಮಾಡಿದ್ದರು ಎಂದು ತಿಳಿಸಿದರು.
ರಾಹುಲ್ಗಾಂದಿ ಮಾತನಾಡಿ ಈ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಲು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರಿಗೆ ನಿರ್ದೇಶಿಸಲಾಗುವದು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲೆಗೆ ಏಮ್ಸ್ ನೀಡುತ್ತೇವೆಂದು ಆಶ್ವಾಸನೆ ನೀಡಿ ಸುಳ್ಳು ಹೇಳುವ ಮೂಲಕ ಜನರನ್ನು ಹಾಗೂ ಅನಿರ್ಧಿಷ್ಟಾವಧಿ ಏಮ್ಸ್ ಹೋರಾಟಗಾರರನ್ನು ಕಡೆಗಣಿಸಿ ಮೋಸ ಮಾಡಿದ್ದಲ್ಲದೆ ದೇಶದಲ್ಲಿ ಎಲ್ಲೂ ಇಲ್ಲದ ಏಮ್ಸ್ ಮಾದರಿ ಆಸ್ಪತ್ರೆ ನೀಡುತ್ತೇವೆಂದು ಬಜೆಟ್ ನಲ್ಲಿ ನಯಾಪೈಸೆಯೂ ಮೀಸಲಿಡದೆ ಮತ್ತೊಮ್ಮೆ ಜನರಿಗೆ ಹಸಿ ಸುಳ್ಳು ಹೇಳುವ ಮೂಲಕ ರಾಜಕೀಯವಾಗಿಯೂ ಮೋಸ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಹಾಗಾಗಿ ಕಾಂಗ್ರೆಸ್ ಪಕ್ಷದ ವಿಧಾನಸಭಾ ಚುನಾವಣೆಯ ಭರವಸೆಯ ಪ್ರಣಾಳಿಯಲ್ಲಿ ಜಿಲ್ಲೆಗೆ ಎಮ್ಸ್ ಮಂಜೂರು ಭರವಸೆ ನೀಡಬೇಕೆಂದು ತಿಳಿಸಿದ್ದಾರೆ.