ಸುದ್ದಿಮೂಲವಾರ್ತೆ
ಗಂಗಾವತಿ,ಏ.೧೧- ನಾಳೆ ಗುರುವಾರದಿಂದ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗುತ್ತಿರುವ ಹಿನ್ನೆಲೆ ಮಂಗಳವಾರ ನಗರದ ತಹಶೀಲ್ ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತರಾದ ಬವಣ್ಣೆಪ್ಪ ಕೆ. ಅವರು ವಿವಿಧ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಏಪ್ರೀಲ್ ೧೩ ರಿಂದ ಏಳು ದಿನಗಳ ಕಾಲ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ನಾಮಪತ್ರ ಸಲ್ಲಿಸಲು ಏಪ್ರೀಲ್ ೨೦ ಕೊನೆ ದಿನವಾಗಿದೆ. ಏ.೨೧ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಏ.೨೪ ಕೊನೆ ದಿನವಾಗಿದೆ. ನಾಮಪತ್ರ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಾಮಪತ್ರ ನಮೂನೆ-೨ ಬಿ ನಲ್ಲಿ ಸಲ್ಲಿಸಬೇಕು. ಸೂಚಕರು ಮತ್ತು ಅಭ್ಯರ್ಥಿಯು ಕಡ್ಡಾಯವಾಗಿ ಸಹಿಯನ್ನು ಮಾಡಿರಬೇಕು. ಸಹಿ ಮಾಡದ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು.
ನಮೂನೆ-೨೬ ರಲ್ಲಿ ಅಫಿಡೆವಿಟ್ ೨೦ ರೂ ಛಾಪಾ ಕಾಗದದಲ್ಲಿ, ೨ ಮೂಲಪ್ರತಿ ಹಾಗೂ ೩ ಝರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಜೊತೆಗೆ ಅಫಿಡೆವಿಟ್ ನ ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು ಎಂದರು. ಅಲ್ಲದೇ, ಒಬ್ಬ ಅಭ್ಯರ್ಥಿ ೪ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ.
ಚುನಾವಣಾ ಉದ್ದೇಶಕ್ಕಾಗಿಯೇ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ತೆರೆದಿರುವ ಹೊಸ ಬ್ಯಾಂಕ್ ಖಾತೆಯ ಪಾಸ್ ಬುಕ್ ನ ನಕಲು ಪ್ರತಿಯನ್ನು ಸಲ್ಲಿಸುವುದು ಹಾಗೂ ದೈನಂದಿನ ವೆಚ್ಚಗಳ ವಿವರಗಳನ್ನು ಮತ್ತು ಓಚರ್ ಗಳನ್ನು ಪ್ರತಿ ಮೂರು ದಿನಕ್ಕೊಮ್ಮೆ ಪರಿಶೀಲನೆಗೆ ಹಾಜರುಪಡಿಸಬೇಕು ಎಂದು ಹೇಳಿದರು.
ನಂತರ ಚುನಾವಣಾ ಪ್ರಚಾರಗಳ ಸಭೆ, ಸಮಾರಂಭ, ರ್ಯಾಲಿಗಳಿಗೆ ಕಡ್ಡಾಯವಾಗಿ ಪರವಾನಿಗೆ ಪಡೆಯುವುದು ಅಗತ್ಯವಾಗಿದೆ. ಒಂದು ವೇಳೆ ಪರವಾನಿಗೆ ಪಡೆಯದೇ ಕಾರ್ಯಕ್ರಮಗಳು ಆಯೋಜನೆ ಮಾಡಿರುವುದು ಕಂಡುಬಂದರೇ, ಅಂತಹ ಅಭ್ಯರ್ಥಿಗಳ ಮೇಲೆ ಪ್ರಕರಣಗಳನ್ನು ದಾಖಲು ಮಾಡಲಾಗುವುದು ಎಂದರು.
ತಹಶೀಲ್ದಾರ್ ಸಂಜಯ್ ಕಾಂಬ್ಳೆ, ಚುನಾವಣಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರಿದ್ದರು.