ಸುದ್ದಿಮೂಲವಾರ್ತೆ
ಕೊಪ್ಪಳ ಏ ೧೧: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಕೊಪ್ಪಳ ವಿಧಾನಸಭೆಗೆ ಅಚ್ಚರಿಯ ಅಭ್ಯರ್ಥಿ ಬರುತ್ತಾರೆ ಎಂಬ ಹೆಸರುಗಳು ತೇಲಿ ಬರುತ್ತಿವೆ. ಈಗ ಪ್ರಯತ್ನಿಸುವವರ ನಡೆ ಇನ್ನೂ ನಿಗೂಡವಾಗಿದೆ.
ಕೊಪ್ಪಳ ವಿಧಾನಸಭೆಯಲ್ಲಿ ಕಳೆದ ಎರಡು ಅವಧಿಯಲ್ಲಿ ಶಾಸಕರಾಗಿರುವ ಕೆ ರಾಘವೇಂದ್ರ ಹಿಟ್ನಾಳರನ್ನು ಮಣಿಸಲು ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುವ ಕಸರತ್ತು ಮಾಡುತ್ತಿದೆ. ಆದರೆ ಈ ಕಸರತ್ತು ಈಗ ಕಗ್ಗಂಟಾಗಿ ಪರಿಣಮಿಸಿದೆ. ವಿಳಂಭವಾದಷ್ಟು ಬಿಜೆಪಿಯ ಕಾರ್ಯಕರ್ತರಲ್ಲಿ ಗೊಂದಲ ಮುಂದುವರಿದಿದೆ.
ಈಗಿರುವ ಮಾಹಿತಿ ಪ್ರಕಾರ ಕೊಪ್ಪಳದ ಸಂಸದ ಸಂಗಣ್ಣ ಕರಡಿ ತಮಗೆ ವಿಧಾನಸಭೆ ಟಿಕೆಟ್ ನೀಡಬೇಕೆಂದು ಒತ್ತಡ ಹಾಕಿದ್ದಾರೆ. ಒಂದು ವೇಳೆ ತಮಗೆ ಟಿಕೆಟ್ ನೀಡದಿದ್ದರೆ ತಮ್ಮ ಕಿರಿಯ ಪುತ್ರ ಗವಿಸಿದ್ದಪ್ಪ ಕರಡಿ, ಇಲ್ಲವೇ ಆಪ್ತರಾಗಿರುವ ಮಹಾಂತೇಶ ಪಾಟೀಲರಿಗೆ ಟಿಕೆಟ್ ನೀಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಕಳೆದ ಬಾರಿ ವಿಧಾನಸಭೆಗೆ ಮೊದಲು ಟಿಕೆಟ್ ಘೋಷಣೆಯಾಗಿ ಕೊನೆಯ ಘಳಿಗೆಯಲ್ಲಿ ಸಂಸದ ಪುತ್ರ ಅಮರೇಶ ಕರಡಿಗೆ ಬಿ ಫಾರ್ಮ ನೀಡಿದ್ದರು. ಆದರೂ ಪಕ್ಷ ನಿಷ್ಠೆ ತೋರಿರುವ ಸಿ ವಿ ಚಂದ್ರಶೇಖರ ಈಗ ಸಹಜವಾಗಿ ತಮಗೆ ಟಿಕೆಟ್ ನೀಡಿ. ಹೈಕಮಾಂಡ ತಮಗೆ ಟಿಕೆಟ್ ನೀಡುವ ವಿಶ್ವಾಸ ಹೊಂದಿದ್ದಾರೆ. ಈ ಮಧ್ಯೆ ಈ ಇಬ್ಬರ ಮಧ್ಯೆದ ತಿಕ್ಕಾಟದಲ್ಲಿ ಬಿಜೆಪಿ ಡಾ ಕೆ ಬಸವರಾಜ ಟಿಕೆಟ್ ನೀಡುತ್ತಾರೆ ಎಂಬ ವದಂತಿ ಇದೆ.
ಡಾ ಕೆ ಬಸವರಾಜ ಕೊಪ್ಪಳದಲ್ಲಿ ಖ್ಯಾತ ವೈದ್ಯರಾಗಿದ್ದು ಪಂಚಮಸಾಲಿ ಸಮಾಜದವರಾಗಿದ್ದಾರೆ. ಕುಷ್ಟಗಿಯ ಮಾಜಿ ಶಾಸಕ ಕೆ ಶರಣಪ್ಪ ವಕೀಲರ ಕಿರಿಯ ಪುತ್ರ ಬಸವರಾಜರಿಗೆ ಕಳೆದ ಬಾರಿ ಲೋಕಸಭೆ ಟಿಕೆಟ್ ನೀಡುತ್ತಾರೆ ಎಂಬ ವದಂತಿ ಇತ್ತು. ಆದರೆ ಕೊನೆಯ ಘಳಿಗೆಯಲ್ಲಿ ಮತ್ತೆ ಸಂಗಣ್ಣ ಕರಡಿಗೆ ಟಿಕೆಟ್ ನೀಡಲಾಗಿತ್ತು. ಕೊಪ್ಪಳದಲ್ಲಿ ಸಿವಿಸಿ ಹಾಗು ಕರಡಿ ಮಧ್ಯೆದ ಟಿಕೆಟ್ ಪೈಪೋಟಿಯ ಮಧ್ಯೆ ಬಸವರಾಜ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ವೈದ್ಯರಿಗೆ ಟಿಕೆಟ್ ನೀಡಿ ಅಚ್ಚರಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ. ಡಾ ಬಸವರಾಜ ನಿಲ್ಲಿಸುವದರಿಂದ ಸಂಗಣ್ಣ ಕರಡಿಗೆ ಪಂಚಮಸಾಲಿಗಳಲ್ಲಿ ಪರ್ಯಾಯ ನಾಯಕರನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಬಸವರಾಜ ಸ್ಪರ್ಧಿಸಿದರೆ ಸಂಗಣ್ಣರ ವೋಟು ಬ್ಯಾಂಕಿಗೆ ಕೈ ಹಾಕುವುದರಿಂದ ಸಂಗಣ್ಣ ಬೇರೆ ಪಕ್ಷ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ ಬಸವರಾಜ ಈ ಕುರಿತು ನನಗೇನು ಗೊತ್ತಿಲ್ಲ. ಇಂದು ಮುಂಜಾನೆಯಿಂದ ಹಲವರು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕೇಳುತ್ತಿದ್ದಾರೆ. ರಾಜ್ಯ ಅಥವಾ ಕೇಂದ್ರ ಬಿಜೆಪಿ ಮುಖಂಡರಾರು ಮಾತನಾಡಿಲ್ಲ. ಹೀಗಾಗಿ ಈ ಏನು ಹೇಳೋಕೆ ಆಗೊಲ್ಲ ಎಂದಿದ್ದಾರೆ.