ಸುದ್ದಿಮೂಲವಾರ್ತೆ
ಕೊಪ್ಪಳ ಏ ೧೧: ಮೇ ೧೦ ರಂದು ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಏಪ್ರಿಲ್ ೧೩ ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಈ ಮಧ್ಯೆ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಏರ್ಪಟ್ಟಿದ್ದು. ಅಥಣಿಯಿಂದ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ನೀಡುವುದು ಅನುಮಾನವಿದೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಸವದಿ ಸಿದ್ದವಾಗಿದ್ದಾರೆ. ಸವದಿ ಕಾಂಗ್ರೆಸ್ ಸೇರ್ಪಡೆಗೆ ಕೊಪ್ಪಳ ಶಾಸಕರ ಮಧ್ಯಸ್ತಿಕೆ ನಡೆದಿದೆ.
ಕಳೆದ ಬಾರಿ ಅಥಣಿಯಲ್ಲಿ ಮಹೇಶ ಕುಮಠಳ್ಳಿ ವಿರುದ್ದ ಸೋಲು ಅನುಭವಿಸಿರುವ ಲಕ್ಷö್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿತ್ತು. ಈ ಮಧ್ಯೆ ಈಗ ಮತ್ತೆ ಚುನಾವಣೆ ಬಂದಿದೆ. ಮಹೇಶ ಕುಮಠಳ್ಳಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಲಕ್ಷö್ಮಣ ಸವದಿ ಬಿಜೆಪಿಗೆ ಗುಡಬೈ ಹೇಳಿ ಕಾಂಗ್ರೆಸ್ ಸೇರಲು ಸಿದ್ದವಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಸೇರ್ಪಡೆಗಾಗಿ ಅವರು ಸಿದ್ದರಾಮಯ್ಯರನ್ನು ಸಂಪರ್ಕಿಸಿ ಹೈಕಮಾಂಡ ಮಟ್ಟದಲ್ಲಿ ಸೇರ್ಪಡೆಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಹಾಗು ಲಕ್ಷö್ಮಣ ಸವದಿ ಮಧ್ಯೆ ಕೊಂಡಿಯಾಗಿ ಸಿದ್ದರಾಮಯ್ಯ ಆಪ್ತ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಮಧ್ಯಸ್ತಿಕೆ ವಹಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಮೂರು ದಿನಗಳಿಂದ ಕ್ಷೇತ್ರದಲ್ಲಿದ್ದ ಪ್ರಚಾರ ಕಾರ್ಯ ಸ್ಥಗಿತಗೊಳಿಸಿ ಬೆಂಗಳೂರು ಹಾಗು ದೆಹಲಿಗೆ ಹೋಗಿದ್ದಾರೆ ಎನ್ನಲಾಗಿದೆ.
ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೆ ಬಸವರಾಜ ರಾಯರಡ್ಡಿ ಕಾರಣ ಎನ್ನಲಾಗಿದೆ. ರಾಯರಡ್ಡಿ ಹಾಗು ಸವದಿ ಕುಟುಂಬದ ಮಧ್ಯೆ ಸಂಬಂದಗಳು ಬೆಳೆದಿವೆ. ಯಲಬುರ್ಗಾದಲ್ಲಿ ಲಿಂಗಾಯತ್ ಗಾಣಿಗ ಸಮಾಜದ ಮತಗಳು ಅಧಿಕ. ಗಾಣಿಗ ಮತಗಳ ಮೇಲೆ ಸವದಿ ಹಿಡಿತವಿರುದರಿಂದ ರಾಯರಡ್ಡಿ ತಮಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈಗ ಸವದಿಯನ್ನು ಕಾಂಗ್ರೆಸ್ ಸೇರಿಸಲು ಮನವೊಲಿಸಿದ್ದಾರೆ ಅದಕ್ಕೆ ರಾಘವೇಂದ್ರ ಹಿಟ್ನಾಳರ ಮಧ್ಯಸ್ತಿಕೆ ವಹಿಸುವಂತೆ ಮಾಡಿದ್ದಾರೆ ಎನ್ನಲಾಗಿದೆ.
ಇಂದು ಅಥವಾ ನಾಳೆ ಬಿಜೆಪಿ ಟಿಕೆಟ್ ಪಟ್ಟಿ ಬಿಡುಗಡೆಯಾಗುತ್ತಿದೆ. ಬಿಜೆಪಿ ಪಟ್ಟಿ ಬಿಡುಗಡೆ ನಂತರದಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ ಇಂದು ಅಥಣಿಯಲ್ಲಿ ಮಾತನಾಡಿದ ಸವದಿ ಜನರ ಸ್ಪರ್ಧಿಸಿ ಎಂದರೆ ಸ್ಫರ್ಧಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.