ಕಲಬುರಗಿ,ಏ.11: ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಿಲ್ಲೆಯ 9 ಮತಕ್ಷೇತ್ರಗಳಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅಚ್ಚರಿಯ ರೀತಿಯಲ್ಲಿ ಬಿಜೆಪಿ ಹಾಲಿ ಶಾಸಕರಿರುವ ಸೇಡಂ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿಲ್ಲ.
ಜಿಲ್ಲೆಯ ಅಫಜಲಪೂರ್ ಮತಕ್ಷೇತ್ರಕ್ಕೆ ಮಾಲೀಕಯ್ಯಾ ಗುತ್ತೇದಾರ, ಜೇವರ್ಗಿ ಮತಕ್ಷೇತ್ರಕ್ಕೆ ಶಿವರಾಜ್ ಪಾಟೀಲ್ ರದ್ದೇವಾಡಗಿ, ಚಿತ್ತಾಪುರ(ಮೀಸಲು) ಕ್ಷೇತ್ರಕ್ಕೆ ಮಣಿಕಂಠ ರಾಠೋಡ್, ಚಿಂಚೋಳಿ (ಮೀಸಲು) ಕ್ಷೇತ್ರಕ್ಕೆ ಡಾ. ಅವಿನಾಶ್ ಜಾಧವ, ಕಲಬುರಗಿ ಗ್ರಾಮೀಣ ( ಮೀಸಲು) ಕ್ಷೇತ್ರಕ್ಕೆ ಬಸವರಾಜ್ ಮತ್ತಿಮೂಡ್, ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ದತ್ತಾತ್ರೇಯ ಪಾಟೀಲ್ ರೇವೂರ್, ಕಲಬುರಗಿ ಉತ್ತರ ಕ್ಷೇತ್ರಕ್ಕೆ ಚಂದ್ರಕಾಂತ್ (ಚಂದು) ಪಾಟೀಲ್ ಹಾಗೂ ಆಳಂದ ಕ್ಷೇತ್ರಕ್ಕೆ ಸುಭಾಷ್ ಗುತ್ತೇದಾರ ಅವರ ಹೆಸರು ಘೋಷಣೆ ಮಾಡಿದೆ.
ಜಿಲ್ಲೆಯ ಐವರು ಹಾಲಿ ಶಾಸಕರಲ್ಲಿ ನಾಲ್ವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಸೇಡಂ ಕ್ಷೇತ್ರಕ್ಕೆ ಬಿಜೆಪಿ ಹಾಲಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ತೀವ್ರ ಕುತೂಹಲ ಮೂಡಿಸಿದ ಚಿತ್ತಾಪುರ ಮತಕ್ಷೇತ್ರಕ್ಕೆ ಮಣಿಕಂಠ ರಾಠೋಡ್ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಅಫಜಲಪೂರ್ ಕ್ಷೇತ್ರದಲ್ಲಿ ಮಾಜಿ ಸಚಿವ ಮಾಲೀಕಯ್ಯ್ ಗುತ್ತೇದಾರ್ ಹಾಗೂ ಅವರ ಸೋದರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರು ಟಿಕೆಟ್ ಗಾಗಿ ಪೈಪೋಟಿ ನಡೆಸಿದರು, ಆದರೆ, ಹೈಕಮಾಂಡ್ ಮಾಲೀಕಯ್ಯಾ ಗುತ್ತೇದಾರ ಅವರಿಗೆ ಮಣೆ ಹಾಕಿದೆ.
ಜೇವರ್ಗಿ ಮತಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ್ ಅವರ ಪುತ್ರ ಚಂದು ಪಾಟೀಲ್ ಅವರು ಟಿಕೆಟ್ ಪಡೆದುಕೊಂಡಿದ್ದಾರೆ.