ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.12: ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಕಳೆದ 50 ವರ್ಷದಲ್ಲಿ ಸಮಾಜಮುಖಿಯಾಗಿ ಮಾಡಿದ ಸೇವೆ ಅನನ್ಯ. ಗೊಮ್ಮಟನ ಕ್ಷೇತ್ರದಲ್ಲಿ ನಿಜ ಕರ್ಮಯೋಗಿಗಳಾಗಿ ನೆಲೆನಿಂತಿದ್ದರು ಎಂದು ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಗೆ ನುಡಿನಮನ ಸಲ್ಲಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.
ಶ್ರೀಗಳು ಭಾಷಾ ಪ್ರಭುತ್ವ ಹೊಂದಿದ್ದ ಕಾರಣ, ಅವರೊಬ್ಬರು ಇತಿಹಾಸ ಪುರುಷರಾಗಿದ್ದಾರೆ, ಕನ್ನಡ ಭಾಷಾ ಮತ್ತು ಸಾಹಿತ ವಿಕಾಸಕ್ಕೂ ಸ್ವಾಮೀಜಿಯ ಕೊಡುಗೆ ಅಪಾರ ಎಂದು ಅವರು ಹೇಳಿದರು.
ನಾನು 7 ಮಸ್ತಕಾಭಿಷೇಕಗಳನ್ನು ನೋಡಿದ್ದೇನೆ. ಸ್ವಾಮೀಜಿ ನೇತೃತ್ವದಲ್ಲಿ ನಾಲ್ಕು ಮಸ್ತಾಕಾಭಿಷೇಕಗಳು ನಡೆದಿವೆ. ಗೊಮ್ಮಟ ಮೂರ್ತಿಗೆ ಸಾವಿರ ವರ್ಷ ತುಂಬಿದ ಸಂದರ್ಭದಲ್ಲಿ ನಡೆದ ಮಸ್ತಾಕಾಭಿಷೇಕ ಅರ್ಥಪೂರ್ಣವಾಗಿತ್ತು. ಗೊಮ್ಮಟನೆ ನೆಲೆ ಮತ್ತು ತ್ಯಾಗವನ್ನು ಇಡೀ ಜಗತ್ತಿಗೆ ಮಾಧ್ಯಮ ಮೂಲಕ ತಲುಪಲು ಸ್ವಾಮೀಜಿ ಬೆಸೆದ ಬಾಂಧವ್ಯ ಚಿರಸ್ಥಾಯಿಯಾಗಿ ಇರಲಿದೆ ಎಂದರು.
ಜಗತ್ತಿನಲ್ಲಿ ಹನ್ನೆರಡು ದೇಶಗಳಲ್ಲಿ ಸ್ವಾಮೀಜಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿವೆ. ಆದರೆ ಪತ್ರಕರ್ತರ ಸಂಘಟನೆಯೊಂದು ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಚಾರುಕೀರ್ತಿ ಸ್ವಾಮೀಜಿ ಅವರಿಗಾಗಿ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯನಿರತ ಪತ್ರಕರ್ತರ ಸಂಘದ ಮತ್ತು ಪತ್ರಕರ್ತರ ಜೊತೆಗೆ ಸ್ವಾಮೀಜಿಯವರು ಉತ್ತಮ ಭಾಂದವ್ಯ ಹೊಂದಿದ್ದರು. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನವನ್ನು ಸಂಘಟಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಕೀರ್ತಿ ಮತ್ತು ಹೆಗ್ಗಳಿಕೆ ಅವರದ್ದಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೂ ಅವರಕೊಡುಗೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ, ಸ್ವಾಮೀಜಿಯವರು ಜನಪರ ನಿಲುವು ತಳೆದಿದ್ದರು, ಅವರ ದೂರ ದೃಷ್ಟಿಕೋನ ನಿಜಕ್ಕೂ ಸ್ಮರಣಾರ್ಹ ಎಂದೂ ಹೇಳಿದರು.
ಪ್ರಜಾವಾಣಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರು ಮಾತನಾಡಿ, ಸ್ವಾಮೀಜಿ ಜೈನ ಸಾಹಿತ್ಯಕ್ಕೆ ಅಷ್ಟೇ ಅಲ್ಲ ಸಮಗ್ರ ದೃಷ್ಟಿಯಿಂದ ಸೇವೆ ಸಲ್ಲಿಸಿದರು. ಚಾತುರ್ಮಾಸದ ಸಂದರ್ಭದಲ್ಲಿ ಅತಿವೃಷ್ಠಿ ಸಂಭವಿಸಿದಾಗ ವ್ರತ ಬಿಟ್ಟು ಅಲ್ಲಿ ಹೋಗಿ ಸೇವೆ ಸಲ್ಲಿಸಿದ ಮಾತೃಹೃದಯಿ ಎಂದು ಹೇಳಿದರು.
ಹಿರಿಯ ಪತ್ರಕರ್ತ ಶೇಷಚಂದ್ರಿಕಾ ಮಾತನಾಡಿ, ಬೆಳಗೊಳ ಮಹಾಸ್ತಕಾಭಿಷೇಕ ನೆಪದಲ್ಲಿ ನಮ್ಮ ಎಲ್ಲರನ್ನೂ ಸ್ವಾಮೀಜಿಯವರು ಗೊಮ್ಮಟನ ಸನ್ನಿಧಿಗೆ ಬೆಸೆದರು ಎಂದು ಮಾಧ್ಯಮಗಳ ಜೊತೆ ಒಡನಾಟವನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಜೈನ್ ಅಸೋಸಿಯೇಶನ್ ಅಧ್ಯಕ್ಷ ಪ್ರಸನ್ನಯ್ಯ ಕೂಡಾ ಸ್ವಾಮೀಜಿಯ ಗುಣಗಾನ ಮಾಡಿದರು. ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್, ಪುಂಡಲೀಕ ಬಾಳೋಜಿ, ಖಜಾಂಚಿ ವಾಸುದೇವ ಹೊಳ್ಳ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಯುಡಬ್ಲ್ಯೂಜೆ ಮಾಜಿ ಅಧ್ಯಕ್ಷ ವಿ.ವೆಂಕಟೇಶ್, ವಿವಿಧ ಜಿಲ್ಲಾ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ನುಡಿನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಸ್ವಾಗತಿಸಿ, ಕೊನೆಯಲ್ಲಿ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ಕೃತಜ್ಞತೆ ಸಲ್ಲಿಸಿದರು.