ಸುದ್ದಿಮೂಲ ವಾರ್ತೆ
ಕೆಜಿಎಫ್., ಏ. 12: ನೂತನವಾಗಿ ನಿರ್ಮಿಸಿರುವ ಕ್ಯಾಸಂಬಳ್ಳಿ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗಳ ಕಟ್ಟಡಗಳನ್ನು ಕೇಂದ್ರ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ಬುಧವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರವಿಕಾಂತೇಗೌಡ, ಕಳೆದ ಒಂದು ದಶಕದಿಂದ ಪೊಲೀಸ್ ಠಾಣೆಗಳ ಉತ್ತಮ ಕಟ್ಟಡಗಳನ್ನು ನಿರ್ಮಿಸುವಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮುಂದಾಗಿದೆ. ರಾಜ್ಯದಾದ್ಯಂತ ಪ್ರತಿ ವರ್ಷ ನೂರಾರು ನೂತನ ಪೊಲೀಸ್ ಠಾಣಾ ಕಟ್ಟಡಗಳನ್ನು ಪೊಲೀಸ್ ವಸತಿ ನಿಗಮದ ವತಿಯಿಂದ ನಿರ್ಮಿಸಿ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕ್ಯಾಸಂಬಳ್ಳಿ, ಬಂಗಾರಪೇಟೆ ಪೊಲೀಸ್ ಠಾಣೆಗಳಿಗೆ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಠಾಣೆಗೆ ಬರುವಂತಹ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಸಲಹೆ ನೀಡಿದರು.
ಪೊಲೀಸರು ಕರ್ತವ್ಯದಲ್ಲಿರುವಾಗ ತಾಳ್ಮೆಯನ್ನು ಮೈಗೂಡಿಸಿಕೊಂಡು, ಸಾರ್ವಜನಿಕರ ನೈತಿಕ ಬೆಂಬಲದೊಂದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ತಮ್ಮ ಸೇವೆಯನ್ನು ದಕ್ಷತೆಯಿಂದ, ಪ್ರಾಮಾಣಿಕವಾಗಿ ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಎಂದರು.
ಕೋಲಾರ ಜಿಲ್ಲಾಧಿಕಾರಿ ಎಂ.ನಾರಾಯಣ, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಧರಣೀದೇವಿ, ಪೊಲೀಸ್ ವಸತಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಭಾಗವಹಿಸಿದ್ದರು.