ಸುದ್ದಿಮೂಲವಾರ್ತೆ,
ಬೀದರ್,ಏ.೧೨:
ಬೀದರ್ ಜಿಲ್ಲೆಯ ಆರು ವಿಧಾನ ಸಭೆ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿರುವ ಹೈಕಮಾಂಡ್ ಬೀದರ್ ಉತ್ತರ ಹಾಗೂ ಭಾಲ್ಕಿ ಕ್ಷೇತ್ರಗಳ ಆಯ್ಕೆಯನ್ನು ಕಾಯ್ದಿರಿಸಿದೆ.
ಬೀದರ್ ದಕ್ಷಿಣದಿಂದ ಡಾ.ಶೈಲೇಂದ್ರ ಬೆಲ್ದಾಳೆ, ಹುಮನಾಬಾದ್ದಿಂದ ಡಾ.ಸಿದ್ದಲಿಂಗಪ್ಪಾ ಪಾಟೀಲ್, ಔರಾದ್ದಿಂದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹಾಗೂ ಬಸವಕಲ್ಯಾಣ ಕ್ಷೇತ್ರದಿಂದ ಶಾಸಕ ಶರಣು ಸಲಗರ್ಗೆ ಟಿಕೆಟ್ ಘೋಷಿಸಲಾಗಿದೆ. ಹೆಚ್ಚು ಕಡಿಮೆ ನಾಲ್ಕು ಕ್ಷೇತ್ರಗಳಿಗೆ ನಿರೀಕ್ಷೆಯಂತೆ ಟಿಕೆಟ್ ಘೋಷಿಸಿದೆ.
ಆದರೆ, ಬೀದರ್ ಉತ್ತರ ಹಾಗೂ ಭಾಲ್ಕಿ ಕ್ಷೇತ್ರಗಳ ಆಯ್ಕೆ ಬಿಜೆಪಿ ಪಕ್ಷಕ್ಕೂ ಕಗ್ಗಂಟಾಗಿ ಪರಿಣಮಿಸಿದೆ. ಸತತ ಎರಡು ಬಾರಿ ಗೆದ್ದು ಬೀಗುತ್ತಿರುವ ಶಾಸಕ ರಹೀಂ ಖಾನ್ಗೆ ಸೋಲಿನ ರುಚಿ ತೋರಿಸುವುದು ಬಿಜೆಪಿಗೆ ಸವಾಲಾಗಿದೆ. ಶತಾಯಗತಾಯ ಬಿಜೆಪಿ ಈ ಬಾರಿ ಈ ಕ್ಷೇತ್ರದಲ್ಲಿ ಗೆಲ್ಲಬೇಕೆಂಬ ತವಕದಲ್ಲಿದೆ. ಹಾಗಾಗಿ, ಟಿಕೆಟ್ ಬಟವಾರೆಗೆ ಮೀನಮೇಷ ಏಣಿಸುತ್ತಿದೆ.
ಬೀದರ್ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಟಿಕೆಟ್ಗೆ ಪೈಪೋಟಿ ನಡೆಸಿರುವುದೇ ಆಯ್ಕೆ ಕಗ್ಗಂಟಿಗೆ ಮೂಲ ಕಾರಣ. ಬಿಜೆಪಿ ಮುಖಂಡ ಗುರುನಾಥ್ ಕೊಳ್ಳೂರ್, ಸೂರ್ಯಕಾಂತ್ ನಾಗಮಾರಪಳ್ಳಿ, ಸೋಮಶೇಖರ್ ಪಾಟೀಲ್ ಲಿಂಗಾಯತ ಕೋಟಾದಡಿ ಟಿಕೆಟ್ ಕೇಳಿದರೆ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ ಹಾಗೂ ಈಶ್ವರ್ ಸಿಂಗ್ ಠಾಕೂರ್ ಹಿಂದುಳಿದ ವರ್ಗಗಳ ಕೋಟಾದಡಿ ಟಿಕೆಟ್ಗೆ ಲಾಬಿ ಇಟ್ಟಿದ್ದಾರೆ.
ಆದರೂ, ಲಿಂಗಾಯತ ಅಭ್ಯರ್ಥಿಯೇ ಕಡೆಗೆ ಫೈನಲ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಯಾರಿಗೆ ಟಿಕೆಟ್ ಸಿಕ್ಕರೂ ಬಂಡಾಯ ಏಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಭಾಲ್ಕಿಯಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಘೋಷಿಸಿದರೆ ಬೀದರ್ ಕ್ಷೇತ್ರದಲ್ಲಿ ಅನ್ಯ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕುವ ಸಂಭವವಿದೆ ಎನ್ನಲಾಗಿದೆ.
ಇನ್ನು ಭಾಲ್ಕಿ ಕ್ಷೇತ್ರವೂ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ದಾಖಲಿಸಿರುವ ಈಶ್ವರ್ ಖಂಡ್ರೆ ಹಿಂದೆಗಿAತ ಈ ಬಾರಿ ಹೆಚ್ಚು ಪ್ರಬಲರಾಗಿದ್ದಾರೆ. ಕ್ಷೇತ್ರದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದು, ಪ್ರಬಲ ಪೈಪೋಟಿಗೆ ಅಣಿಯಾಗಿದ್ದಾರೆ. ಹೆಚ್ಚು ಕಡಿಮೆ ಆದರೆ, ಪಕ್ಷ ಅಧಿಕಾರಕ್ಕೆ ಬಂದರೆ ಖಂಡ್ರೆ ಕುರ್ಚಿ ಮುಂದಿನ ಸಾಲಲ್ಲಿ ಎಂದು ಈಗಲೇ ಹವಾ ಶುರುವಾಗಿದೆ.
ಬಿಜೆಪಿಯಲ್ಲಿ ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಡಿಕೆ ಸಿದ್ರಾಮ್ ಹಾಗೂ ಮರಾಠಾ ಸಮುದಾಯದ ಮುಖಂಡರ ಹೆಸರುಗಳು ಮುನ್ನೆಲೆಗೆ ಬರುತ್ತಿವೆ.
ಎರಡು ಬಾರಿ ಸೋತಿರುವ ಡಿಕೆಗೆ ಟಿಕೆಟ್ ಕೊಡಲು ಹೈಕಮಾಂಡ್ಗೂ ಮನಸ್ಸಿಲ್ಲ. ಅತ್ತರೂ ಕರೆದರೂ ಡಿಕೆಗೆ ಮತದಾರ ಕಳೆದೆರಡು ಚುನಾವಣೆಗಳಲ್ಲಿ ಮತದಾರ ಕರಗಿಲ್ಲದಿರುವುದು ಸ್ಪಷ್ಟ. ಆದರೆ, ಪ್ರಕಾಶ್ ಖಂಡ್ರೆಗೆ ಟಿಕೆಟ್ ಕೊಟ್ಟರೆ ಮರಾಠಾ ಸಮುದಾಯ ಮುನಿಸಿಕೊಳ್ಳುವ ಅಪಾಯವೂ ಇದೆ. ಹಾಗಾಗಿಯೇ, ಟಿಕೆಟ್ ಆಯ್ಕೆ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷಕ್ಕೂ ಟಿಕೆಟ್ ಬಟವಾರೆ ಕಗ್ಗಂಟಾಗಿರುವುದು ರಾಜಕೀಯದ ವೈಶಿಷ್ಟವೋ ವಿರ್ಯಾಸವೋ ಗೊತ್ತಿಲ್ಲ.