ಸುದ್ದಿಮೂಲ ವಾರ್ತೆ
ಹೊಸಕೋಟೆ, ಏ.13: ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿರುವುದರಿಂದ ಅತೃಪ್ತಗೊಂಡಿರುವ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆಯುವ ನಿರ್ಧಾರ ಮಾಡಿದ್ದು, ಗುರುವಾರ ತಮ್ಮ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಬಿಜೆಪಿಗೆ ವಲಸೆ ಬಂದಿರುವ ರಮೇಶ್ ಜಾರಕಿಹೊಳಿ ಆಪ್ತ, ಮಹೇಶ್ ಕುಮಟಳ್ಳಿಗೆ ಬಿಜೆಪಿ ಮಣೆ ಹಾಕಿದೆ. ತಮಗೆ ಟಿಕೆಟ್ ಸಿಗದ ಕಾರಣ ಲಕ್ಷ್ಮಣ ಸವದಿ ಸ್ವಪಕ್ಷದವರ ವಿರುದ್ಧವೇ ಬುಧವಾರ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಕಿಡಿಕಾರಿದ್ದಾರೆ.
ಬಿಜೆಪಿ ಪಕ್ಷಕ್ಕೆ ನನ್ನಂತಹ ನಿಷ್ಠಾವಂತನಿಗೆ ಗೌರವ ಕೊಟ್ಟಿಲ್ಲ. ಅಂತಹ ಪಕ್ಷದಲ್ಲಿ ನಾನು ಇರುವ ಅಗತ್ಯತೆ ಇಲ್ಲ. ವಿಧಾನ ಪರಿಷತ್ ಸ್ಥಾನಕ್ಕೂ ರಾಜಿನಾಮೆ ನೀಡುವಂತೆ ಕ್ಷೇತ್ರದ ಜನತೆ ಸಲಹೆ ನೀಡಿದ್ದಾರೆ. ನಾನೂ ಕೂಡ ಸ್ವಾಭಿಮಾನಿ ರಾಜಕಾರಣಿ. ಲಜ್ಜೆಗೆಟ್ಟ ರಾಜಕಾರಣಿ ಅಲ್ಲ. ಅಧಿಕಾರದ ಅಮಲಿನಲ್ಲೂ ನಾನಿಲ್ಲ. ನಾನು ಯಾರ ಬೆನ್ನಿಗೂ ಚೂರಿ ಹಾಕಿಲ್ಲ ಎಂದು ಹೇಳಿ ಭಾವುಕರಾದರು.
ನನಗೆ ನನ್ನ ಅಥಣಿ ಕ್ಷೇತ್ರದ ಜನರೇ ಹೈಕಮಾಂಡ್. ಅವರು ಹೇಳಿದಂತೆ ಕೇಳುವುದು ನನ್ನ ಕರ್ತವ್ಯ,. ಜನರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು ತಕ್ಷಣ ವಿಧಾನಪರಿಷತ್ ಸದಸ್ಯತ್ವ ಸೇರಿದಂತೆ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.
ತಮ್ಮ ಟಿಕೆಟ್ ತಪ್ಪುವುದಕ್ಕೆ ರಮೇಶ್ ಜಾರಕಿಹೊಳಿಯೇ ಕಾರಣ ಎಂದ ಲಕ್ಷ್ಮಣ ಸವದಿ, ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ‘ನನ್ನೊಂದಿಗೆ ಸ್ನೇಹದಿಂದ ಇದ್ದ, ಪ್ರೀತಿಯಿಂದ ನೋಡುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಈಗ ಎರಡನೇ ಬಾರಿಗೆ ಸಿಎಂ ಆಗುವ ಭಾಗ್ಯ ಇಲ್ಲ. ಪ್ರಧಾನಿ ಆಗುವ ಯೋಗ ಇದೆ. ಇದೆಲ್ಲದರ ನಡುವೆ ನನಗೂ ಒಬ್ಬರು ಗುರು ಇದ್ದಾರೆ. ಅವರ ಮಾತು ಮೀರುವ ಪರಿಸ್ಥಿತಿ ಬಂದಿದೆ. ಕ್ಷಮಿಸಿ ಗುರುವೇ’ ಎಂದು ಸಿಎಂ ವಿರುದ್ಧವೂ ಪರೋಕ್ಷವಾಗಿ ಮಾತಿನ ತಿರುಗೇಟು ಕೊಟ್ಟರು.
ನನ್ನಂತಹ ಹಿರಿಯ ನಾಯಕನಿಗೆ ಟಿಕೆಟ್ ಕೊಡದಿದ್ದಾಗ ಬಿಜೆಪಿ ವರಿಷ್ಟರು ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಆದರೆ, ಇತರ ಪಕ್ಷಗಳ ಅನೇಕ ಮುಖಂಡರು ಸಂಪರ್ಕದಲ್ಲಿದ್ದಾರೆ. ನಾಳೆಯೇ ಗಟ್ಟಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪಕ್ಷ ಬದಲಾವಣೆಯ ಮುನ್ಸೂಚನೆ ನೀಡಿದರು.
ರಾಜು ಕಾಗೆ ಜೊತೆ ಚರ್ಚೆ:
ಇದೇ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಮನೆಗೆ ಮಾಜಿ ಶಾಸಕ ಹಾಗೂ ಸವದಿ ಸ್ನೇಹಿತ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಭೇಟಿ ನೀಡಿ ಚರ್ಚಿಸಿದ್ದಾರೆ. ಅರ್ಧ ಗಂಟೆಗಯೂ ಹೆಚ್ಚು ಹೊತ್ತು ಮಾತುಕತೆ ನಡೆಸಿದ ಹಳೇ ಸ್ನೇಹಿತರು ಹೊಸ ಲೆಕ್ಕಾಚಾರ ಹಾಕಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಖಚಿತ ಎಂದು ಹೇಳಲಾಗುತ್ತಿದೆ.