ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.12: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಡಾ.ರಾಜನಂದಿನಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಅವರೊಂದಿಗೆ ಚರ್ಚೆ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು.
ಡಾ.ರಾಜನಂದಿನಿ ಅವರು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅಲ್ಲದೆ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಬೇಸರಗೊಂಡಿರುವ ಡಾ.ರಾಜನಂದಿನಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ.ರಾಜನಂದಿನಿ ಅವರು, ʼಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಲಿದೆ. ನನಗೆ ಟಿಕೆಟ್ ನೀಡಲಿದೆ ಎಂದು ನಂಬಿದ್ದೆ. ಆದರೆ ನನಗೆ ಅವಕಾಶ ಸಿಗಲಿಲ್ಲ. ಬಿಜೆಪಿಯವರು ತನ್ನನ್ನು ಉತ್ತಮವಾಗಿ ಸ್ವಾಗತಿಸಿದ್ದಾರೆ. ಪಕ್ಷ ಎಲ್ಲಿಯೇ ಕೆಲಸ ಮಾಡುವಂತೆ ಸೂಚಿಸಿದರೂ ಮಾಡುತ್ತೇನೆʼ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಪರೂಪದ ರಾಜಕಾರಣಿ, ಸಮಾಜವಾದಿ ಹಿನ್ನಲೆಯ ಕಾಗೋಡು ತಿಮ್ಮಪ್ಪ ಅವರ ಮಗಳು ಡಾ.ರಾಜನಂದಿನಿ ಇವತ್ತು ಕಾಂಗ್ರೆಸ್ ಪಕ್ಷದ ಸ್ಥಾನಮಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಹಿಂದುಳಿದ ವರ್ಗದ ಡಾ.ರಾಜನಂದಿನಿ ವೃತ್ತಿಯಲ್ಲಿ ವೈದ್ಯರು. ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ಇದ್ದರು. ಇವರು ಬಿಜೆಪಿ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಸಾಕಷ್ಟು ಬಲ ಬಂದಿದೆ. ಸೊರಬ, ಸಾಗರ ಸೇರಿ ಶಿವಮೊಗ್ಗ ಜಿಲ್ಲೆಯಲ್ಲಿ ಇವರ ಸೇರ್ಪಡೆಯಿಂದ ಎಲ್ಲರೂ ಗೆಲ್ಲಲು ದೊಡ್ಡ ಶಕ್ತಿ ತುಂಬಿದಂತಾಗಿದೆ. ನಮ್ಮ ಸರ್ಕಾರ ಬಂದಾಗ ಅವರಿಗೂ ಸೂಕ್ತ ಸ್ಥಾನಮಾನ ಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ನನ್ನ ಎದೆಗೆ ಚೂರಿ ಹಾಕಿದಂತಾಗಿದೆ: ಕಾಗೋಡು
‘ನನ್ನ ಮಗಳು ಡಾ.ರಾಜನಂದಿನಿ ಈ ರೀತಿ ಮಾಡುತ್ತಾಳೆ ಎಂದು ನಾನು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ರಾಜಕೀಯದಲ್ಲಿ ಸ್ಥಿರತೆ, ಬದ್ಧತೆ ಇಟ್ಟುಕೊಳ್ಳಬೇಕು. ಬದ್ಧತೆಯಿಂದಾಗಿಯೇ ನಾವು ಇಷ್ಟೊಂದು ಕೆಲಸ ಮಾಡಲು ಸಾಧ್ಯವಾಗಿದೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿ ಸೇರ್ಪಡೆಯಾಗಿರುವುದು ನನ್ನ ಎದೆಗೆ ಚೂರಿ ಹಾಕಿದಂತೆ ಆಗಿದೆ,’ ಎಂದು ಕಾಗೋಡು ತಿಮ್ಮಪ್ಪ ಪ್ರತಿಕ್ರಿಯಿಸಿದ್ದಾರೆ.
ಮಗಳಾಗಿ ಈ ರೀತಿ ನಡೆದುಕೊಳ್ಳುತ್ತಾಳೆ ಎಂದು ಕನಸಿನಲ್ಲಿಯು ಕಂಡಿರಲಿಲ್ಲ. ನಾನು ಕಾಂಗ್ರೆಸ್ ತೊರೆಯುವುದಿಲ್ಲ. ಕಾಂಗ್ರೆಸ್ ಪರವಾಗಿಯೇ ಈ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ. ಅವರು ಬಿಜೆಪಿ ಸೇರ್ಪಡೆಯಾಗಿರುವ ಅವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಕಾಗೋಡು ಹೇಳಿದರು.