ಸುದ್ದಿ ಮೂಲ ವಾರ್ತೆ
ಬೆಂಗಳೂರು,ಏ.13:ಎಲೆಕ್ಟ್ರಾನಿಕ್ ಸಿಟಿಯ ಟೆಕ್ ಮಹೀಂದ್ರದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅನೇಕ ಸಂಸ್ಥೆಗಳ ಸಿಇಒಗಳು ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಉದ್ಯೋಗಿಗಳಿಗೆ ಮತದಾನ ಉತ್ಸವದಲ್ಲಿ ತಪ್ಪದೆ ಭಾಗವಹಿಸಿ ಮತದಾನ ಮಾಡಲು ತಿಳಿಸುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರಿಗೆ ಭರವಸೆ ನೀಡಿದರು.
ಎಲೆಕ್ಟ್ರಾನಿಕ್ ಸಿಟಿಯ ಟೆಕ್ ಮಹೀಂದ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಮಾತನಾಡಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಳಿಗೆ ಮತದಾನ ಮಾಡುವ ಒಲವು ಹೆಚ್ಚಿರುವುದಿಲ್ಲ. ಈ ಸಂಬಂಧ ಅವರಲ್ಲಿರುವಂತಹ ತಪ್ಪು ಕಲ್ಪನೆ ಹಾಗೂ ಆಲೋಚನೆಗಳನ್ನು ಬದಲಿಸಿ ಎಲ್ಲರಿಂದಲೂ ಮತದಾನ ಮಾಡಿಸುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ ಎಂದು ಹೇಳಿದರು.
ಬೆಂಗಳೂರು ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಹೆಚ್ಚು ಮತದಾನ ಮಾಡಿಸುವ ಉದ್ದೇಶವನ್ನಿಟ್ಟುಕೊಂಡು, ಎಲ್ಲಾ ಕಡೆ ಮತದಾನ ಜಾಗೃತಿ ಜಾಥ, ನಾಟಕ ಸೇರಿದಂತೆ ನಮ್ಮ ಬೆಂಗಳೂರು ಐಕಾನ್ಸ್ ಗಳ ಮೂಲಕ ಮತದಾರರು ತಪ್ಪದೆ ಮತಚಲಾಯಿಸುವಂತೆ ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಂಬಳ ಸಹಿತ ರಜೆ ನೀಡುವ ಭರವಸೆ:
ಎಲೆಕ್ಟ್ರಾನಿಕ್ ಸಿಟಿಯ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಮತದಾನ ದಿನಾವಾದ ಮೇ 10 ರಂದು ಎಲ್ಲರೂ ತಪ್ಪದೆ ಮತದಾನ ಮಾಡುವ ಸಲುವಾಗಿ ಸಂಬಳ ಸಹಿತ ರಜೆ ನೀಡಲಾಗುವುದೆಂದು ಭರವಸೆ ನೀಡಿದರು.
ಈ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ಜಂಟಿ ಆಯುಕ್ತರಾದ ಕೃಷ್ಣಮೂರ್ತಿ, ವಿವಿಧ ಸಂಸ್ಥೆಗಳ ಸಿಇಒಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.