ಸಿಂಧನೂರು.ಏ.೧೩ –
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಕಟ್ಟಿ ಬೆಳೆಸಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಪ್ರಸ್ತುತ ಬಿಜೆಪಿಯಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಮಾಜಿ ಸಚಿವ, ಕೆಆರ್ಪಿಪಿ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ತಾಲ್ಲೂಕಿನ ಚೆನ್ನಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕೆಆರ್ಪಿಪಿ ಅಭ್ಯರ್ಥಿ ಮಲ್ಲಿಕಾರ್ಜುನ ನೆಕ್ಕಂಟಿ ಪರವಾಗಿ ರೋಡ್ ಶೋ ನಡೆಸಿ, ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಜನರಿಗೆ ಒಳ್ಳೆಯದಾಗಿಲ್ಲ. ಅಧಿಕಾರ ಕೇಂದ್ರೀಕರಣ ಮಾಡಿಕೊಂಡು ತಮ್ಮ ಉಳಿವಿಗಾಗಿ ಪ್ರಯತ್ನಿಸುತ್ತಿದ್ದಾರೆ ಹೊರತು ಜನಹಿತದ ಬಗ್ಗೆ ಕಾಳಜಿ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಕೆಆರ್ಪಿಪಿ ಪಕ್ಷದಿಂದ ೨೦ಕ್ಕೂ ಅಧಿಕ ಶಾಸಕರು ವಿಧಾನಸಭೆ ಪ್ರವೇಶ ಮಾಡಲಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ಶಾಸಕರು ಒಂದು ಭಾಗವಾದರೆ, ನಮ್ಮ ಪಕ್ಷದ ಶಾಸಕರು ಒಂದು ಭಾಗವಾಗಿ ನಿಂತು ಅಭಿವೃದ್ಧಿ ಹಾಗೂ ಜನಪರ ಕೆಲಸ ಮಾಡಲಿದ್ದಾರೆ ಎಂದರು.
ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ನೆಕ್ಕಂಟಿ ಅವರಿಗೆ ಮತ ನೀಡಿದರೆ ತಮಗೆ ಮತ ನೀಡಿದಂತೆ. ಗಂಗಾವತಿಯಲ್ಲಿಯೇ ಮನೆ ಮಾಡಿದ್ದು, ಯಾವುದೇ ಸಮಸ್ಯೆಗಳು ಬಂದರೂ ತಾವೇ ಸ್ಪಂದಿಸುವುದಾಗಿ ತಿಳಿಸಿದರು.
ಅಭ್ಯರ್ಥಿ ಮಲ್ಲಿಕಾರ್ಜುನ ನೆಕ್ಕಂಟಿ ಮಾತನಾಡಿ ಮತಯಾಚನೆ ಮಾಡಿದರು. ಚನ್ನಳ್ಳಿ, ಸಿದ್ರಾಂಪುರ, ಮಾವಿನಮಡು ಮತ್ತಿತರ ಗ್ರಾಮದಲ್ಲಿ ಬುಧವಾರ ಸಂಜೆ ರೋಡ್ ಶೋ ನಡೆಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಪಾವನಿ, ಮುಖಂಡ ಅನಿಲ ಮತ್ತಿತರರು ಇದ್ದರು.