ಸುದ್ದಿಮೂಲ ವಾರ್ತೆ,
ಹೂವಿನಹಡಗಲಿ, ಏ. ೧೩:
ಹೂವಿನಹಡಗಲಿ ಸರ್ಕಾರಿ ಎಂಜಿನಿಯರಿಗ್ ಕಾಲೇಜಿನ ರಿಕ್ವೆಸ್ಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಕಾರಣ ಬಸ್ನಿಂದ ಹೊರಗಡೆ ಜಿಗಿದು ತೀವ್ರ ಅಸ್ವಸ್ಥಳಾಗಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಪಡೆಯುತ್ತಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಹೂವಿನಹಡಗಲಿಯ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನ ಮೊದಲನೇ ಸೆಮಿಸ್ಟರ್ ವಿದ್ಯಾರ್ಥಿನಿ ಶ್ವೇತಾ ಮೃತಳು. ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ ಹೂವಿನಹಡಗಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದಲ್ಲಿ ಬಸ್ ನಿಲ್ಲಿಸದ ಕಾರಣ ಬಸ್ನಿಂದ ಬುಧವಾರ ಹೊರಗಡೆಗೆ ಜಿಗಿದ ಶ್ವೇತ, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲ ನೀಡದೇ ಗುರುವಾರ ಮೃತಪಟ್ಟಿದ್ದಾಳೆ.
ಹೂವಿನಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್ನಲ್ಲಿದ್ದ ವಿದ್ಯಾರ್ಥಿನಿ ಶ್ವೇತಾ ಕಾಲೇಜು ಸ್ಟಾಪ್ ಬಂದಾಗ ಬಸ್ ನಿಲುಗಡೆಗೆ ಮನವಿ ಮಾಡಿದರೂ ಬಸ್ನ ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ಲಿಸಲಿಲ್ಲ. ಕಾರಣ ವಿದ್ಯಾರ್ಥಿನಿ ಮುಖ್ಯವಾದ ತರಗತಿಗೆ ಹಾಜರಾಗಬೇಕಿದ್ದ ಕಾರಣ ಬಸ್ನಿಂದ ಹೊರಗಡೆ ಜಿಗಿದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ.
ವಿದ್ಯಾರ್ಥಿನಿ ಶ್ವೇತಳ ಸಾವಿನಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯ ಕಾರಣ ಪೊಲೀಸರು ಸಾರಿಗೆ ಬಸ್ ವಶಕ್ಕೆ ತೆಗೆದುಕೊಂಡು, ಬಸ್ನ ಚಾಲಕ ಮತ್ತು ನಿರ್ವಾಹಕರ ವಿರುದ್ಧ ದೂರು ದಾಖಲಿಸಿದ್ದಾರೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.