ಶ್ರೀನಿಧಿ.ಜೈನ್
ಬೆಂಗಳೂರು.ಏ.13: ಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್. ಇವರ ಪೂರ್ಣ ಹೆಸರು ಭೀಮರಾವ್ ರಾಮಜೀ ಅಂಬೇಡ್ಕರ್. ಇವರ ತಂದೆ ರಾಮಜೀ ಮಾಲೋಜಿ ಸಕ್ಪಾಲ್. ತಾಯಿ ಭೀಮಬಾಯಿ ಸಕ್ಪಾಲ್. ಇವರ 14 ನೇ ಮತ್ತು ಕೊನೆಯ ಮಗನಾಗಿ ಭೀಮರಾವ್ ಜನಿಸಿದ್ದರು.
ಅವರ ಜನ್ಮದಿನವಾದ ಏ.14 ಅನ್ನು ದೇಶಾದ್ಯಂತ ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿ ಎಂದು ಸಾರ್ವಜನಿಕ ರಜಾದಿನವಾಗಿ ಆಚರಿಸಲಾಗುತ್ತದೆ.
ಭಾರತ ಸಂವಿದಾನವನ್ನು ಕಟ್ಟಿದ ಮಹಾನ್ ವ್ಯಕ್ತಿಯಾಗಿದ್ದರಿಂದ ಇವರನ್ನು ಸಂವಿದಾನದ ಶಿಲ್ಪಿ ಎಂದು ಕರೆಯಲ್ಪಟ್ಟಿತ್ತು. ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ಒಂದರಲ್ಲಿ 1891 ಏಪ್ರಿಲ್ 14ನೇ ರಂದು ಜನಿಸಿದವರಾಗಿದ್ದು, ಇವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರಾಗಿದ್ದು, ಮಹಾರ ಎಂಬ ಜನಾಂಗದಲ್ಲಿ ಹುಟ್ಟಿದ್ದರು. ಅವರು 1908ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಪಡೆದರು.
ಅಷ್ಟೇ ಅಲ್ಲದೇ ಹೆಚ್ಚಿನ ಓದಿಗಾಗಿ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಅಭ್ಯಾಸ ಮಾಡಿದರು.1915 ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. 1916 ರಲ್ಲಿ ಅವರು ಮುಂದೆ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡರು.
ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಷ್ಯತೆಯ ನೋವು ಅನುಭವಿಸಿದ್ದರು. ಇದ್ದನೇಲ್ಲ ಮೆಟ್ಟಿ ನಿಲ್ಲಲು ಅಸಮಾನತೆಯ ಸಮಾಜದ ವಿರುದ್ದ ಧ್ವನಿಯತ್ತಿದಂತಹ ಮಹಾನ್ ವ್ಯಕ್ತಿ. ಎಷ್ಟೋ ಕೆಳಜನಾಂಗದವರು ದೇವಸ್ಥಾನ ಪ್ರವೇಶಿಸುವಂತಿರಲ್ಲಿ, ಮತ್ತು ಮೇಲು ಜಾತಿಯವರು ಬಳಸುವಂತಹ ಕೆರೆ ಬಾವಿಗಳನ್ನು ಉಪಯೋಗಿಸುವಂತಿರಲಿಲ್ಲ. ಇಂತಹ ಎಲ್ಲ ಪದ್ದತಿಯ ವಿರುದ್ದ ಧ್ವನಿಯತ್ತಿದಂತಹ ಧೀಮಂತರು ಅಂಬೇಡ್ಕರ್.
ಅಸ್ಪೃಶ್ಯತೆಯ ಜೊತೆಗೆ ಜಾತಿ ವ್ಯವಸ್ಥೆಯ ನಿರ್ಮೂಲನೆಗೂ ಅವರು ಕೊಡುಗೆ ನೀಡಿದರು. ಅವರ ಸಾಟಿಯಿಲ್ಲದ ಕೆಲಸಕ್ಕಾಗಿ ಮತ್ತು ಭಾರತೀಯ ಸಂವಿಧಾನದ ಶಿಲ್ಪಿಯಾಗಿರುವುದರ ಜೊತೆಗೆ ಭಾರತೀಯ ಕಾನೂನು ಸಚಿವ ಸ್ಥಾನ ಸಹ ಅಲಂಕರಿಸಿದ್ದರು. 1990 ರಲ್ಲಿ, ಭಾರತದಲ್ಲಿ ಅವರ ಅತ್ಯುನ್ನತ ಸಾಧನೆಗಾಗಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.
ಜಾತಿ ತಾರತಮ್ಯದಲ್ಲಿ ಬೇಸತ್ತ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳು ಮುಂದಾದರು. ಇವರು ಬೌದ್ಧ ಧರ್ಮ ಸೇರುವ ಮೊದಲು ಕೆಲವು ಪ್ರತಿಜ್ಞೆಯನ್ನು ಕೈಗೊಂಡರು. ಅವರು ಕೈಗೊಂಡ ಪ್ರತಿಜ್ಞೆಗಳು, ಪ್ರಮಾಣಗಳು ಈ ಕೆಳಗಿನಂತಿವೆ.
1) ಅಸ್ಪೃಶ್ಯತೆ ಆಚರಿಸುವುದಿಲ್ಲ, ಮನುಷ್ಯರೆಲ್ಲರನ್ನು ಒಂದೇ ಮನೋಭಾವದಲ್ಲಿ ನೋಡುತ್ತೇನೆ.
2) ಕೊಲ್ಲುವುದಿಲ್ಲ. ಹಿಂಸೆಯನ್ನುಂಟು ಮಾಡುವುದಿಲ್ಲ
3) ಕದಿಯುವುದಿಲ್ಲ
4)ಮದ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ
5) ತಪ್ಪಾದ ಮೋಹಕ್ಕೆ ಒಳಗಾಗುವುದಿಲ್ಲ
ಎಂಬ ಪಂಚತತ್ವಗಳನ್ನು ಅನುಸರಿಸುತ್ತೇನೆ ಎಂದು ಹೇಳಿದ ಅವರು ಅಸ್ಪೃಶ್ಯರಿಗೆ ಹಿಂದೂ ಧರ್ಮದಲ್ಲಿ ಏಳಿಗೆಯಿಲ್ಲದಿರುವುದರಿಂದ ಮತಾಂತರ ಅನಿವಾರ್ಯ ಹಾಗೂ ಬೌದ್ಧಧರ್ಮ ಮತಾಂತರಕ್ಕೆ ಅತ್ಯಂತ ಸೂಕ್ತವಾದದ್ದು ಎಂಬ ನಿರ್ಧರಕ್ಕೆ ಬಂದರು.
‘ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯದ ಪ್ರಮುಖ ತತ್ವಗಳಲ್ಲಿ ಬೌದ್ಧ ಧರ್ಮವು ನಿಜವಾದ ಧರ್ಮ ಎಂದು ನಂಬಿದ್ದೇನೆ ಈ ಭಾವನೆಯಿಂದ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮಕ್ಕೆ ಸೇರುವುದರ ಮೂಲಕ ಹೊಸ ಹುಟ್ಟನ್ನು ಕಂಡುಕೊಳ್ಳುತ್ತೇನೆ ಮತ್ತು ಬೌದ್ಧ ಧರ್ಮವನ್ನು ಭಾರತದ ಎಲ್ಲೆಡೆ ಪ್ರಚಾರಿಸಲು ಉಳಿದ ಜೀವನವನ್ನು ಮೀಸಲಾಗಿಡುತ್ತೇನೆ ಎಂದು ಘೋಷಿಸಿದರು.