ಸುದ್ದಿಮೂಲ ವಾರ್ತೆ
ಚಿಕ್ಕಮಗಳೂರು, ಏ.13: ಜೆಡಿಎಸ್ ತೊರೆದು, ಕಾಂಗ್ರೆಸ್ ಟಿಕೆಟ್ ಇಲ್ಲದೆ ಅತಂತ್ರವಾಗಿದ್ದ ವೈ.ಎಸ್.ವಿ. ದತ್ತಾ ಈಗ ಮರಳಿ ಮತ್ತೆ ಜೆಡಿಎಸ್ ಸೇರಿದ್ದಾರೆ.
ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಗುರುವಾರ ಕಡೂರು ತಾಲ್ಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ಅವರ ಮನೆಗೆ ತೆರಳಿ ಮರಳಿ ಪಕ್ಷಕ್ಕೆ ಸೇರುವಂತೆ ಮನವೊಲಿಸಿದರು. ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೂ ಸಹ ದೂರವಾಣಿ ಕರೆ ಮಾಡಿ ಪಕ್ಷೇತರನಾಗಿ ಚುನಾವಣೆಗೆ ನಿಲ್ಲುವುದು ಬೇಡ, ಜೆಡಿಎಸ್ನಿಂದಲೇ ಸ್ಪರ್ಧಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ದತ್ತಾ ಮರಳಿ ಜೆಡಿಎಸ್ ಸೇರುವ ನಿರ್ಧಾರ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ರೇವಣ್ಣ, ದತ್ತಾ ಜೆಡಿಎಸ್ ಸೇರ್ಪಡೆ ಏನಿಲ್ಲ, ಜೆಡಿಎಸ್ ಅವರ ಕಳೆದ 50 ವರ್ಷದ ಮನೆ. ಅವರಿಗೆ ಅವರ ಮನೆಗೆ ಬರೋದಕ್ಕೆ ಏನಿದೆ ವಿಶೇಷ. ದೇವೇಗೌಡರೇ ಹೇಳಿದ ಮೇಲೆ ಎಲ್ಲಾ ಮುಗಿಯಿತು. ಈಗಾಗಲೇ ಟಿಕೆಟ್ ಘೋಷಣೆ ಮಾಡಲಾದ ಅಭ್ಯರ್ಥಿ ಧನಂಜಯ್ ಅವರನ್ನ ಕರೆಯಿಸಿ ದೇವೇಗೌಡರು ಮಾತನಾಡುತ್ತಾರೆ. ಜೆಡಿಎಸ್ ಗೆಲ್ಲಬೇಕು, ಕಾರ್ಯಕರ್ತರು ಉಳಿಯಬೇಕು ಎಂದು ಹೇಳಿದ್ದಾರೆ.
ದತ್ತಾ ಜೆಡಿಎಸ್ ಪಕ್ಷದಿಂದಲೇ ಏ.18ರಂದು ಕಡೂರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ದತ್ತಾ ನಾಮಪತ್ರ ಸಲ್ಲಿಕೆ ವೇಳೆ ದೇವೇಗೌಡರೇ ಬಂದು ಪಕ್ಕದಲ್ಲಿ ಕುಳಿತಿರುತ್ತಾರೆ. ನೀವು ಯಾರೂ ದತ್ತಾ ಅವರ ಕೈಬಿಡಬಾರದು ಎಂದು ರೇವಣ್ಣ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನೀವು ಬೇರೆ ಯೋಚನೆ ಮಾಡಬೇಡಿ. ದೇವೇಗೌಡರ ಮಾತನ್ನ ನಾನು, ದತ್ತಾ, ನೀವು ಎಲ್ಲಾ ಪಾಲಿಸಬೇಕು. ದತ್ತಾ ಅವರನ್ನು ಶಾಸಕರನ್ನಾಗಿ ಮಾಡಲೇಬೇಕು ಎಂದು ದೇವೇಗೌಡರು ಹೇಳಿದ್ದಾರೆ. ಇದು ನಮ್ಮ ಮನೆಯ ಚುನಾವಣೆ ಎಂದು ನಾವೆಲ್ಲರೂ ಮಾಡುತ್ತೇವೆ. ನಮಗೆ ಹೊಳೆನರಸೀಪುರ-ಕಡೂರು ಬೇರೆ ಬೇರೆ ಅಲ್ಲ. ನಾನು ದತ್ತಾ ಜೊತೆ ಇರುತ್ತೇನೆ ಎಂದು ರೇವಣ್ಣ ವಿಶ್ವಾಸದ ಮಾತುಗಳನ್ನಾಡಿದರು.
ದೇವೇಗೌಡರ ಮಾತಿಗೆ ಬೆಲೆ ಕೊಡುತ್ತೇನೆ:
‘ಪಕ್ಷೇತರವಾಗಿ ಸ್ಪರ್ಧಿಸುವುದು ಬೇಡ ಎಂದು ದೇವೇಗೌಡರು ನನಗೆ ಹೇಳಿದ್ದಾರೆ. ಹಾಗಾಗಿ ಅವರ ಮಾತಿಗೆ ಬೆಲೆ ಕೊಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆದಿದ್ದೇನೆ. ಎಲ್ಲರ ಸಮ್ಮತಿಯೊಂದಿಗೆ ಜೆಡಿಎಸ್ ಸೇರಿದ್ದು, 18ರಂದು ನಾಮಪತ್ರ ಸಲ್ಲಿಸಲಿದ್ದೇನೆ,’ ಎಂದು ದತ್ತಾ ಹೇಳಿದರು.