ಕಲಬುರಗಿ, ಏ.13: ರಾಜ್ಯ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 8 ಅಭ್ಯರ್ಥಿಗಳಿಂದ 8 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೇಸ್, ಬಿಜೆಪಿ, ಜೆಡಿಎಸ್ ನ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಮೊದಲ ದಿನವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ಏ.17ರಂದು ಮತ್ತೊಮ್ಮೆ ಸಾವಿರಾರು ಕಾರ್ಯಕರ್ತರು ಸಮ್ಮುಖದಲ್ಲಿ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇನ್ನೂ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ, ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರು ಮೊದಲ ದಿನವೇ ತಮ್ಮ ಅಪಾರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಚುನಾವಣಾಧಿಕಾರಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಇತ್ತ ಅವರ ಸಹೋದರ ನಿತೀನ್ ಗುತ್ತೇದಾರ ಅವರು ಸಹ ಮೊದಲ ದಿನವೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಸಹೋದರನಿಗೆ ಸವಾಲ್ ಹಾಕಿದ್ದಾರೆ. ಅಲ್ಲದೇ, ಜೆಡಿಎಸ್ ಅಭ್ಯರ್ಥಿ ಶಿವಕುಮಾರ್ ನಾಟಿಕರ್ ಅವರು ಸಹ ನಾಮಪತ್ರ ಸಲ್ಲಿಸಿ ಚುನಾವಣೆ ಕಣಕ್ಕೆ ಧುಮುಕಿದರು.
ಆಳಂದ ಮತಕ್ಷೇತ್ರದಲ್ಲಿಯೂ ಮೊದಲ ದಿನವೇ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಸುಭಾಶ್ ಗುತ್ತೇದಾರ, ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಆರ್ ಪಾಟೀಲ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಮಹೇಶ್ವರಿ ವಾಲಿ ಅವರು ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.
ಸೇಡಂ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬಾಲರಾಜ್ ಗುತ್ತೇದಾರ ಅವರು ನಾಮಪತ್ರ ಸಲ್ಲಿಸಿದರು.
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಅಫಜಲಪುರ, ಸೇಡಂ, ಗುಲಬರ್ಗಾ (ದಕ್ಷಿಣ) ಹಾಗೂ ಆಳಂದ ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿವೆ. ಇನ್ನುಳಿದ 5 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಪರ ಹೆಚ್ಡಿಕೆ ಪ್ರಚಾರ:
ಚುನಾವಣೆ ಹಿನ್ನೆಲೆ ಕಲಬುರಗಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಚಾರ ಕೈಗೊಂಡು ಅಭ್ಯರ್ಥಿಗಳ ಹುಮ್ಮಸು ಇಮ್ಮಡಿಗೊಳಿಸಿದ್ದಾರೆ. ಅಫಜಲಪುರ ಅಭ್ಯರ್ಥಿ ಶಿವಕುಮಾರ್ ನಾಟಿಕಾರ್, ಆಳಂದ ಅಭ್ಯರ್ಥಿ ಮಹೇಶ್ವರಿ ವಾಲಿ ಹಾಗೂ ಸೇಡಂ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಪರ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಪ್ರಚಾರ ನಡೆಸಿದರು.