ಸುದ್ದಿಮೂಲ ವಾರ್ತೆ
ಬೆಳಗಾವಿ, ಏ.14: ಅಥಣಿ ಕ್ಷೇತ್ರದಿಂದ ಟಿಕೆಟ್ ಸಿಗದೆ ಬಿಜೆಪಿ ಜೊತೆ ಮುನಿಸಿಕೊಂಡಿರುವ ಲಕ್ಷ್ಮಣ ಸವದಿ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಸವದಿ ಅಥಣಿ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಿದ ಕಾರಣ ಬಿಜೆಪಿ ನಾಯಕರ ವಿರುದ್ಧ ಸವದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಥಣಿ ಪಟ್ಟಣದಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದ ಸವದಿ, ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು, ಪಕ್ಷೇತರನಾಗಿ ಸ್ಪರ್ಧಿಸಬೇಕೆ ಅಥವಾ ಕಾಂಗ್ರೆಸ್ ಪಕ್ಷ ಸೇರಬೇಕೆ ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಸಭೆಯಲ್ಲಿ ಭಾಗಿಯಾಗಿದ್ದ ಜನರೂ ಸಹ ತಾವು ಕಾಂಗ್ರೆಸ್ ಸೇರುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಮಾನಾಡಿದ ಸವದಿ, ಅಥಣಿ ಟಿಕೆಟ್ ಹಂಚಿಕೆ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ನಾನೂ ಭಾಗಿಯಾಗಿದ್ದೆ. ನನಗೆ ಅಥಣಿ ಟಿಕೆಟ್ ನೀಡುವಂತೆ ವರಿಷ್ಠರನ್ನು, ರಾಜ್ಯ ನಾಯಕರನ್ನು ಕೋರಿದ್ದೆ. ನನಗೆ ಟಿಕೆಟ್ ನೀಡಿದಿದ್ದರೆ ಬಿಜೆಪಿಗೆ ಗೆಲುವು ಕಷ್ಟ ಎಂದೂ ಸಹ ಹೇಳಿದ್ದೆ. ಅಥಣಿಯಲ್ಲಿ ಬಿಜೆಪಿ ಸೋತರೆ ಆ ಸೋಲಿನ ಹಣೆಪಟ್ಟಿ ನನ್ನ ವಿರುದ್ಧ ಕಟ್ಟಲು ತಂತ್ರ ನಡೆದಿದೆ. ನನ್ನ ಕ್ಷೇತ್ರ, ಇಲ್ಲಿ ನಾನು ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ಕಟ್ಟಿ ಬೆಳೆಸಿದ್ದೇನೆ. ಆದರೆ ನನ್ನ ಮನವಿಗೆ ಸ್ಪಂದಿಸಲಿಲ್ಲ ಹೀಗಾಗಿ ಬೇಸರವಾಗಿದೆ ಎಂದು ಹೇಳಿದರು.
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡುತ್ತೇನೆ. ಅಥಣಿ ಅಭಿವೃದ್ದಿಗೆ ಶ್ರಮಿಸುವ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಇಲ್ಲವಾದರೆ ಪಕ್ಷೇತರರನಾಗಿ ಸ್ಪರ್ಧಿಸುತ್ತೇನೆ ಎಂದು ಸವದಿ ಹೇಳಿದರು.
ಮೂಲಗಳ ಪ್ರಕಾರ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಲಿದ್ದಾರೆ. ಶುಕ್ರವಾರ ವಿಧಾನಪರಿಷತ್ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.