ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.14: ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕಲು ಕಾಂಗ್ರೆಸ್ನಿಂದ ಸಂಸದ ಡಿ.ಕೆ. ಸುರೇಶ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಊಹಾಪೋಗಳಿಗೆ ತೆರೆ ಎಳೆದು ಘೋಷಿತ ಅಭ್ಯರ್ಥಿ ವಿ. ರಘುನಾಥ ನಾಯ್ಡು ಅವರಿಗೆ ಬಿ- ಫಾರಂ ವಿತರಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಬಿ-ಫಾರಂಗಳನ್ನು ವಿತರಿಸಿದರು. ಬೆಳಗ್ಗೆ ಪದ್ಮನಾಭನಗರ ಕ್ಷೇತ್ರದ ಬಿ-ಫಾರಂ ಪಡೆಯಲು ಬಂದಿದ್ದ ರಘುನಾಥ ರೆಡ್ಡಿ ಅವರಿಗೆ ಬೆಳಗ್ಗೆ ನೀಡರಲಿಲ್ಲ. ಇದರಿಂದ ರಘುನಾಥ ರೆಡ್ಡಿ ವಾಪಸ್ ತೆರಳಿದ್ದರು. ಹೀಗಾಗಿ ಪದ್ಮನಾಭನಗರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗುತ್ತದೆ ಎಂಬ ಅನುಮಾನವೂ ಮೂಡಿತ್ತು. ಆದರೆ, ಸಂಜೆ ವೇಳೆಗೆ ಡಿ. ಕೆ. ಶಿವಕುಮಾರ್ ಫೋನ್ ಕರೆ ಮಾಡಿ ಅಭ್ಯರ್ಥಿಯನ್ನು ಕರೆಸಿಕೊಂಡು ಬಿ-ಫಾರಂ ವಿತರಣೆ ಮಾಡಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಹಾಲಿ ಶಾಸಕರು ಆರ್. ಅಶೋಕ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಶೋಕ ಅವರಿಗೆ ಪದ್ಮನಾಭನಗರದ ಜೊತೆಗೆ ಕನಕಪುರ ಕ್ಷೇತ್ರದ ಟಿಕೆಟ್ ಸಹ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಮರ್ಥವಾಗಿ ಎದುರಿಸಬೇಕಾದರೆ ಒಕ್ಕಲಿಗ ನಾಯಕರೇ ಆದ ಅಶೋಕ್ ಸೂಕ್ತ ಎಂದು ಬಿಜೆಪಿ ತೀರ್ಮಾನಿಸಿದೆ. ಇದಕ್ಕೆ ಎದುರಾಗಿ ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಡಿ. ಕೆ. ಸುರೇಶ್ ಅವರನ್ನು ಪದ್ಮನಾಭನಗರದಿಂದ ಕಾಂಗ್ರೆಸ್ ಕಣಕ್ಕಿಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು.
ಆದರೆ, ಇದನ್ನು ಅಲ್ಲಗಳೆದಿದ್ದ ಡಿ.ಕೆ. ಶಿವಕುಮಾರ್, ಪದ್ಮನಾಭನಗರದಲ್ಲಿ ಅಶೋಕ್ ಅವರನ್ನು ಎದುರಿಸಲು ನಮ್ಮ ಅಭ್ಯರ್ಥಿ ರಘುನಾಥ ನಾಯ್ಡು ಅವರೇ ಸಾಕು. ಕ್ಷೇತ್ರದಲ್ಲಿ ನಾಯ್ಡು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.