ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.14: ಕೆ.ಎಸ್. ಈಶ್ವರಪ್ಪ ರಾಜೀನಾಮೆ ಬಳಿಕ ಶಿವಮೊಗ್ಗದ ಟಿಕೆಟ್ ಆಕಾಂಕ್ಷಿಯಾಗಿರುವ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
ಬೆಂಗಳೂರಿನ ಬಿಎಸ್ವೈ ನಿವಾಸದಲ್ಲಿ ಭೇಟಿಯಾದ ಕಾಂತೇಶ್ ಪಕ್ಷಕ್ಕಾಗಿ ನನ್ನ ತಂದೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ನಿವೃತ್ತಿ ನಂತರ ತಮಗೆ ಟಿಕೆಟ್ ನೀಡಬೇಕು ಎಂಬುದು ಕಾರ್ಯಕರ್ತರ ಆಶಯವೂ ಆಗಿದೆ ಎಂದು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು. ಈ ವೇಳೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಬಿಎಸ್ವೈ ಭರವಸೆ ನೀಡಿ ಕಳುಹಿಸಿದ್ದಾರೆ.
ಬಳಿಕ ಮಾತನಾಡಿದ ಕಾಂತೇಶ್, ಪಕ್ಷ ನಮ್ಮ ಕೈ ಬಿಡಲ್ಲ,ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಬಿಜೆಪಿ, ಆರ್ಎಸ್ಎಸ್ ಸಂಘಟನೆಗಳು ನನ್ನ ತಂದೆ ಮತ್ತು ಕುಟುಂಬವನ್ನು ಸಂಸ್ಕಾರದಿಂದ ಬೆಳೆಸಿದೆ. ನನಗೆ ಸಂಪೂರ್ಣವಾದ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ. ನನಗೆ ಒಂದು ಅವಕಾಶ ಸಿಗುವ ನಂಬಿಕೆಯಲ್ಲಿದ್ದೇನೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನಮ್ಮ ತಂದೆ ನಿರ್ಧಾರಕ್ಕೆ ನಾವು ಎಲ್ಲರೂ ಬದ್ಧರಾಗಿದ್ದೀವಿ ಎಂದರು.
ಸಾವಿರಾರು ಕಾರ್ಯಕರ್ತರಿಗೆ ನಮ್ಮ ತಂದೆ ಮಾದರಿ. ಬಿಜೆಪಿ ಪಕ್ಷ ಟಿಕೆಟ್ ಕೊಡದಿದ್ದರೆ ಅದಕ್ಕೂ ಬದ್ಧ ಆಗಿರುತ್ತೇನೆ. ಸಾಯುವವರೆಗೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಇರುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಆಯನೂರು ಮಂಜುನಾಥ್ ಎಲ್ಲೂ ಹೋಗಲ್ಲ. ಅವರು ಬಿಜೆಪಿಯಲ್ಲೇ ಉಳಿಯುತ್ತಾರೆ. ಶಿವಮೊಗ್ಗದಲ್ಲಿ ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಆಯನೂರು ಮಂಜುನಾಥ್ ಬೆಂಬಲಿಸುತ್ತಾರೆ ಎಂದು ಕಾಂತೇಶ್ ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.