ಸುದ್ದಿಮೂಲ ವಾರ್ತೆ
ಬೆಂಗಳೂರು.ಏ.14: ಹಾಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರು ಪುಲಿಕೇಶಿ ನಗರದ ಟ್ಯಾನರಿ ರಸ್ತೆಯಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 132ನೇ ಅಂಬೇಡ್ಕರ್ ಜಯಂತಿಯನ್ನು ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಳಪಾಯ ಹಾಕಿಕೊಟ್ಟ ಮಹನೀಯರು.
ಸಮಾನತೆ ಸಮಾಜದ ಕನಸು ಕಂಡಂತಹ ಮಹನೀಯರಾದ ಅವರು ನಮ್ಮ ಭಾರತದ ಹೆಮ್ಮೆಯ ವ್ಯಕ್ತಿತ್ವ. ಸಂವಿಧಾನ ಎಂಬ ಮಹಾನ್ ಅರಿವನ್ನು ನೀಡಿದ ಅಂಬೇಡ್ಕರ್ ಅವರು ಬಹಳ ಕಷ್ಟ-ನೋವುಗಳ ನಡುವೆ ಬದುಕು ಕಟ್ಟಿಕೊಂಡವರು. ಅಸಮಾನತೆ, ಅಸ್ಪøಶ್ಯತೆಯನ್ನು ತೊಲಗಬೇಕೆಂಬ ನಿಟ್ಟಿನಲ್ಲಿ ಹೋರಾಟಗೈದು ಸಮಾನತೆಯ ಶಿಕ್ಷಣಕ್ಕೆ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.
ಪ್ರತಿಯೊಬ್ಬರು ಅಂಬೇಡ್ಕರ್ ಅವರ ನಿಲುವು, ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಾರತದ ಸತ್ಪ್ರಜೆಯಾಗಲು ಪ್ರಯತ್ನಿಸಬೇಕು. ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಅವರು, ತಮ್ಮ ಶಿಕ್ಷಣದ ಮೂಲಕ ಅವರನ್ನು ಕೀಳಾಗಿ ಕಂಡ ಸಮಾಜಕ್ಕೆ ಉತ್ತರ ನೀಡಿದರು. ಭಾರತದ ಅತ್ಯುನ್ನತ ಸ್ಥಾನಕ್ಕೇರಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರ ಬದುಕಿನ ಹೋರಾಟದ ದಿನಗಳು ನಮಗೆಲ್ಲರಿಗೂ ಮಾದರಿಯಾಗಬೇಕು. ನಾವು ಕೂಡ ಸಮಾನತೆಯ ಸಮಾಜವನ್ನು ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸೋಣ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿಗೂ ಶುಭಾಶಯ ತಿಳಿಸಿದ ಶಾಸಕ
ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಅಖಂಡ ಶ್ರೀನಿವಾಸ್ ಅವರು ಕಾರ್ಯಕರ್ತರತ್ತ ಕೈ ಬೀಸಿ ನೆರೆದಿದ್ದವರಿಗೆ ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿದರು. ಇನ್ನು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಬರುವ ವೇಳೆ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರಳಿ ಹಾಗೂ ಅಖಂಡ ಶ್ರೀನಿವಾಸ ಮೂರ್ತಿ ಅವರು ಎದುರು ಬದುರಾದರು. ಆಗ ಅಖಂಡ ಶ್ರೀನಿವಾಸ್ ಅವರು ತಮ್ಮ ಎದುರಾಳಿ ಎಂದು ನೋಡದೆ ಆತ್ಮೀಯತೆ, ಸಹೋದರ ಭಾವದಿಂದ ಅವರನ್ನು ಅಭಿನಂದಿಸಿದರು.
ಕಾಂಗ್ರೆಸ್ ಪಕ್ಷದ ಪುಲಿಕೇಶಿ ನಗರದ ಟಿಕೆಟ್ ಆಕಾಂಕ್ಷಿಯಾಗಿರುವ ಅಖಂಡ ಶ್ರೀನಿವಾಸ್ ಅವರು ಮೂರನೇ ಪಟ್ಟಿಯಲ್ಲಿ ಟಿಕೆಟ್ ಸಿಗಬಹುದೆಂಬ ವಿಶ್ವಾಸದಲ್ಲಿದ್ದಾರೆ.