ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.1: ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಜ್ಯ ನಾಯಕರು ಖಾಸಗಿ ರೆಸಾರ್ಟ್ನಲ್ಲಿ ಮಹತ್ವದ ಸಭೆ ನಡೆಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ಪ್ರಾರಂಭಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಮತ್ತಿತರರು ಭಾಗವಹಿಸಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತಿತರರು ಗೈರು ಹಾಜರಾಗಿದ್ದರು. ಪಕ್ಷದ ಪೂರ್ವಾನುಮತಿ ಪಡೆದಿದ್ದರು ಎಂದು ತಿಳಿದುಬಂದಿದೆ.
ಎಲ್ಲಾ ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರುಗಳೊಂದಿಗೆ ಶುಕ್ರವಾರ ಸಭೆ ನಡೆಸಲಾಯಿತು. ಯಾವ ಕ್ಷೇತ್ರಕ್ಕೆ ಯಾರನ್ನು ಆಯ್ಕೆ ಅಭ್ಯರ್ಥಿಗಳನ್ನಾಗಿ ಮಾಡಿದರೆ ಸೂಕ್ತ, ಕ್ಷೇತ್ರದಲ್ಲಿ ಅವರ ಪರವಾಗಿ ಇರುವಂತ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೇನು, ಇಂತಹವರಿಗೆ ಟಿಕೆಟ್ ನೀಡಿದರೆ ಅವರು ಗೆಲ್ಲಬಹುದೇ, ಕ್ಷೇತ್ರದಲ್ಲಿ ಅವರ ವರ್ಚಸ್ಸು ಹೇಗಿದೆ ಎಂಬಂತಹ ವಿಷಯಗಳನ್ನು ಪ್ರತ್ಯೇಕವಾಗಿ ಮಾಹಿತಿಗಳನ್ನು ಸಂಗ್ರಹಿಸಲಾಯಿತು.
ಮೊದಲ ದಿನ 20 ಜಿಲ್ಲೆಗಳ ಮುಖಂಡರಿಗೆ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ಪ್ರತಿ ಜಿಲ್ಲೆಗೂ ಸಹ 30 ನಿಮಿಷಗಳ ಕಾಲ ಕಾಲಾವಕಾಶ ನೀಡಿ ಸ್ಥಳೀಯ ಮಟ್ಟದಲ್ಲಿ ಯಾವ ಅಭಿಪ್ರಾಯ ಇದೆ ಎಂಬ ಮಾಹಿತಿಯನ್ನು ಪಡೆಯಲಾಯಿತು. ಆಯಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಮತ್ತು ಖಜಾಂಚಿ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಳನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಭಾನುವಾರವೂ ಸಹ ಪ್ರಮುಖರ ಸಭೆ ಮುಂದುವರಿಯಲಿದೆ. 224 ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವವರಿಗೆ ಟಿಕೆಟ್ ನೀಡಬೇಕೇ ಬೇಡವೆ? ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಇದ್ದರೆ ಕ್ಷೇತ್ರದಲ್ಲಿ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬಂತಹ ವಿಷಯಗಳು ಚರ್ಚೆಗೆ ಬರಲಿವೆ. ಅಂತಿಮವಾಗಿ ಜಾತಿವಾರು, ಪ್ರದೇಶವಾರು ಹೀಗೆ ನಾನಾ ರೀತಿಯಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ.
ಈ ಸಭೆಯ ಬಳಿಕ ರಾಜ್ಯಮಟ್ಟದ ಕೋರ್ಕಮಿಟಿ ಸಭೆ ನಡೆಸಲಾಗುತ್ತದೆ. ಅಲ್ಲಿ ಯಾವ ಕ್ಷೇತ್ರಕ್ಕೆ ಯಾರು ಆಕಾಂಕ್ಷಿಗಳು ಎಂಬುದನ್ನು ಅಂತಿಮವಾಗಿ ನಿರ್ಧರಿಸಿ ಬಿಜೆಪಿ ಹೈಕಮಾಂಡ್ಗೆ ಕಳುಹಿಸಲಾಗುತ್ತದೆ. ಬಹುತೇಕ ಏಪ್ರಿಲ್ ಮೊದಲ ವಾರ ಕಳೆದ ನಂತರವಷ್ಟೇ ಬಿಜೆಪಿ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ.