ಸುದ್ದಿಮೂಲ ವಾರ್ತೆ
ತುಮಕೂರು, ಏ.2: ಹೈಕೋರ್ಟ್ ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿಲ್ಲ ಎಂದು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಸ್ಪಷ್ಟಪಡಿಸಿದರು.
ಅವರು ತಾಲೂಕಿನ ಬಳ್ಳಗೆರೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹೈಕೋರ್ಟ್ ಚುನಾವಣಾ ಅಕ್ರಮದ ಕುರಿತಂತೆ ತೀರ್ಪನ್ನು ನೀಡಿದ್ದು, ತೀರ್ಪಿನಲ್ಲಿ ಎಲ್ಲಿಯೂ ಸಹ ತಮ್ಮನ್ನು ಅನರ್ಹಗೊಳಿಸಲಾಗಿದೆ ಎಂದು ಉಲ್ಲೇಖಿಸಿಲ್ಲ. ಶಾಸಕ ಸ್ಥಾನ ಅಸಿಂಧುಗೊಳಿಸಲಾಗಿದೆ ಎಂದಷ್ಟೇ ಉಲ್ಲೇಖಿಸಿದೆ ಎಂದು ಹೇಳಿದರು.
ಶಾಸಕ ಗೌರಿಶಂಕರ್ ನೇರವಾಗಿ ಬಾಂಡ್ ವಿತರಿಸಿದ್ದಾರೆ ಅಥವಾ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತೀರ್ಪಿನ ಯಾವುದೇ ವಿಭಾಗದಲ್ಲೂ ಪ್ರಕಟಿಸಿಲ್ಲ. ನನ್ನ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಎನ್ನುವವರು ಅಕ್ರಮ ನಡೆಸಿದ್ದಾರೆ ಎಂಬ ಆರೋಪದಡಿಯಲ್ಲಿ ನನ್ನನ್ನು ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿ ತೀರ್ಪು ಪ್ರಕಟಿಸಿದೆ. ಆದರೆ, ಅನರ್ಹಗೊಳಿಸಲಾಗಿದೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದ್ದು ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಆದ್ದರಿಂದ ತಾವು ಈಗಾಗಲೇ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಆರೋಪದಿಂದ ಮುಕ್ತನಾಗುತ್ತೇನೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸುರೇಶ್ ಗೌಡ ಸುದ್ದಿಗೋಷ್ಠಿ ನಡೆಸಿ ವಾಸ್ತವ ಸಂಗತಿಗಳನ್ನು ತಿಳಿಸದೆ ವೃಥಾ ತಮ್ಮ ಮೇಲೆ ಆರೋಪ ಮಾಡಿದ್ದು, ತೀರ್ಪಿನಲ್ಲಿ ಎಲ್ಲಿಯೂ ತಮ್ಮನ್ನು ಅಪರಾಧಿ ಎಂದು ಹೇಳಿಲ್ಲ. ಮಾಜಿ ಶಾಸಕರು ತಾವು ಸತ್ಯಹರಿಶ್ಚಂದ್ರನಂತೆ ಮಾತನಾಡಿದ್ದು, ಅವರು ಶಾಸಕರಾಗಿದ್ದಾಗ ಮಾಡಿರುವ ಭೂ ಹಗರಣದ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿವೆ. ಸೋಲಿನ ಭೀತಿಯಿಂದ ಅವರು ತಮ್ಮ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿದ್ದು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಚುನಾವಣಾ ಅಕ್ರಮಗಳು ನಡೆದಾಗ ಮಾಜಿ ಶಾಸಕರು ನೇರ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಿತ್ತು. ಆಗ ದೂರು ನೀಡದ ವ್ಯಕ್ತಿ ತಾವು ಸೋತಾಗ ಅದನ್ನು ಸಹಿಸಿಕೊಳ್ಳಲಾಗದೆ ನ್ಯಾಯಾಲಯದ ಮೊರೆ ಹೋದರು. ಅವರಿಗೆ ಅಷ್ಟು ಬದ್ದತೆ ಇದ್ದಿದ್ದರೆ, ಅಂದೇ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಿತ್ತು. ಇನ್ನೂ ಅವರು ನಾನು ಗೆದ್ದಾಗ ಅದನ್ನು ಸಹಿಸಿಕೊಳ್ಳದೆ ಕೋರ್ಟ್ ಗೆ ಹೋಗಿ ನನ್ನ ಶಾಸಕ ಸ್ಥಾನವನ್ನು ವಜಾಗೊಳಿಸಿ ತಮ್ಮನ್ನು ಶಾಸಕರೆಂದು ಘೋಷಿಸಬೇಕೆಂದು ಅರ್ಜಿ ಸಲ್ಲಿಸಿದ್ದು, ಬದಲಾಗಿ ನನ್ನನ್ನು ವಜಾಗೊಳಿಸಿ ಎಂದಲ್ಲಾ ಎಂದು ತಿಳಿಸಿದರು.
ಗ್ರಾಮಾಂತರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿಯಾಗಿದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ, ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನಗೆ ಆಶೀರ್ವದಿಸಲಿದ್ದಾರೆ. ಅನಿತಾ ಕುಮಾರಸ್ವಾಮಿಯವರು ಅಭ್ಯರ್ಥಿಯಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನೇ ಅಭ್ಯರ್ಥಿ ಎಂದ ಮೇಲೆ ಬೇರೆ ಅಭ್ಯರ್ಥಿ ಬರುವ ಪ್ರಶ್ನೆಯಿಲ್ಲ. ಜಿಲ್ಲೆಗೆ ದೇವೇಗೌಡರ ಕುಟುಂಬದವರು ಯಾರೂ ಸಹ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಸುದ್ದಿಗೋಷ್ಟಿಯಲ್ಲಿ ರಾಜ್ಯ ವಕ್ತಾರರಾದ ಡಾ.ಹಾಲನೂರು ಲೇಪಾಕ್ಷ, ಬೆಳಗುಂಬ ವೆಂಕಟೇಶ್, ಹಾಲನೂರು ಅನಂತ್, ನಾಗವಲ್ಲಿ ದೀಪಕ್ ಮತ್ತಿತರು ಉಪಸ್ಥಿತರಿದ್ದರು.