ಸುದ್ದಿಮೂಲ ವಾರ್ತೆ
ಕಲಬುರಗಿ, ಏ.2: ಮಾಜಿ ಮುಖ್ಯಮಂತ್ರಿ ದಿ. ಎನ್ ಧರ್ಮಸಿಂಗ್ ಅವರ ಪ್ರತಿನಿಧಿಸಿದ ಜಿಲ್ಲೆಯ ಜೇವರ್ಗಿ ಮತಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ತಯಾರಿ ಬಿರುಸುಗೊಂಡಿದೆ. ಕಾಂಗ್ರೆಸ್, ಕೆರ್ ಪಿಪಿ, ಆಪ್ ಹಾಗೂ ಬಿಎಸ್ಪಿ ಪಕ್ಷದ ಅಭ್ಯರ್ಥಿ ಘೋಷಣೆ ಮಾಡಲಾಗಿದ್ದು, ಬಿಜೆಪಿ, ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಘೋಷಣೆಯಾಗಬೇಕಿದೆ.
ಸದ್ಯ ಮತಕ್ಷೇತ್ರವು ಕಾಂಗ್ರೆಸ್ ವಶದಲ್ಲಿದ್ದು, ಹಾಲಿ ಕಾಂಗ್ರೆಸ್ ನ ಡಾ. ಅಜಯ್ ಸಿಂಗ್ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಹಾಲಿ ಶಾಸಕರಿಗೆ ಮತ್ತೆ ಮಣೆಹಾಕಿದ್ದು, ತನ್ನ ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆ ಮಾಡಿದೆ. ಇತ್ತ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಮನಿ,
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಹಿಂದುಳಿದ ವರ್ಗದ ಸಂಚಾಲಕಿ ಶೋಭಾ ಬಾಣಿ ಅವರು ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ.
ಬಿಜೆಪಿ ನಾಯಕರು ರಾಜ್ಯಾದ್ಯಂತ ಕೆಲ ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್ ಮಾಡಿದ್ದು, ಅ ಪಟ್ಟಿಯಲ್ಲಿ ಜೇವರ್ಗಿ ಮತಕ್ಷೇತ್ರವು ಇದೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ವರಿಷ್ಠರು ಜೇವರ್ಗಿ ಕ್ಷೇತ್ರಕ್ಕೆ ಅಳೆದು ತೂಗಿ ಅಭ್ಯರ್ಥಿ ಘೋಷಣೆ ಮಾಡಲಿದ್ದಾರೆ ಎನ್ನುವ ಮಾತು ಮತಕ್ಷೇತ್ರದಲ್ಲಿ ಚರ್ಚೆಯಲ್ಲಿದೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ.
ಅಲ್ಲದೇ, ಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ ಜೆಡಿಎಸ್ ಪಕ್ಷದಿಂದಲೂ ಅಭ್ಯರ್ಥಿ ಘೋಷಣೆ ಯಾಗಬೇಕಿದೆ. ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಅಶೋಕ್ ಸಾಹು ಗೋಗಿ ಅವರನ್ನು ಘೋಷಣೆ ಮಾಡಲಾಗಿದೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ವಿಶ್ವನಾಥ್ ರೆಡ್ಡಿ ರಾಜಳ್ಳಿ ಹಾಗೂ ಬಿಎಸ್ಪಿ ಪಕ್ಷದ ಅಭ್ಯರ್ಥಿಯಾಗಿ ಭೀಮರಾಯ ನೆಲೋಗಿ ಅವರನ್ನು ಘೋಷಣೆ ಮಾಡಲಾಗಿದ್ದು, ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
** ಜಾತಿ ಲೆಕ್ಕಾಚಾರ:
ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳನ್ನು ಒಳಗೊಂಡ ಜೇವರ್ಗಿ ಕ್ಷೇತ್ರದಲ್ಲಿ ಲಿಂಗಾಯತ, ಕುರುಬ ಸಮುದಾಯ, ಕೋಲಿ ಸಮಾಜ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿವೆ.
***
ಒಟ್ಟು ಮತದಾರರು 2,35,038.
ಪುರುಷರು 11,9,248.
ಮಹಿಳೆಯರು 11,5,762.
ಇತರೆ 28.
***
ಜೇವರ್ಗಿ ಕ್ಷೇತ್ರದ ಚುನಾವಣಾ ಹಿನ್ನೋಟ:
2008:
ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ (ಬಿಜೆಪಿ) 46,531
ಎನ್. ಧರ್ಮ ಸಿಂಗ್ (ಕಾಂಗ್ರೆಸ್) 46,461
2013:
ಡಾ. ಅಜಯ್ ಸಿಂಗ್
(ಕಾಂಗ್ರೆಸ್)67,038.
ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ (ಬಿಜೆಪಿ) 30,338.
2018:
ಡಾ. ಅಜಯ್ಸಿಂಗ್(ಕಾಂಗ್ರೆಸ್)68,508.
ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್
(ಬಿಜೆಪಿ)52,452.