ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.2: ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿ ಸಭೆ ಈ ತಿಂಗಳ 4 ರಂದು ನಡೆಯಲಿದ್ದು, ವಿಧಾನಸಭಾ ಚುನಾವಣೆಗೆ ಎರಡನೇ ಪಟ್ಟಿ ಅಂದು ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಾಮರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ವಿಚಾರವೂ ಸಹಇತ್ಯರ್ಥವಾಗಬಹುದು. ನಾನು ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕಿದೆ, ನಾಡಿದ್ದು ನಡೆಯುವ ಸಭೆಯಲ್ಲಿ ತೀರ್ಮಾನ ಆಗಬಹುದು ಎಂದರು. ವರುಣಾ ಕ್ಷೇತ್ರವನ್ನು ಬಿಜೆಪಿ ಪಕ್ಷ ಪ್ರಮುಖ ಕ್ಷೇತ್ರವಾಗಿ ಪರಿಗಣಿಸಿರುವ ಬಗ್ಗೆ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ನೀಡಿ, ಯಾರನ್ನು ಯಾರಿಂದಲೂ ಕಟ್ಟಿಹಾಕಲು ಆಗಲ್ಲ. ಒಬ್ಬರನ್ನು ಸೋಲಿಸುವುದು ಗೆಲ್ಲಿಸುವುದು ಜನರ ಕೈಲಿದೆ. ನಾನು ನಾಮಪತ್ರ ಸಲ್ಲಿಕೆಗೆ ಮಾತ್ರ ವರುಣಾಗೆ ಹೋಗುತ್ತೇನೆ. ಯತೀಂದ್ರ ಅವರು ಅಲ್ಲಿನ ಹಾಲಿ ಶಾಸಕರು, ಅವರು ಕೂಡ ಅಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಾರೆ. ಚುನಾವಣೆಯಲ್ಲಿ ನನ್ನ ಎದುರಾಳಿ ಯಾರು ಎಂಬ ಬಗ್ಗೆ ಯೋಚನೆ ಮಾಡಲು ಹೋಗಲ್ಲ, ಯಾರು ನಮ್ಮ ಶಾಸಕರಾಗಬೇಕು ಎಂದು ತೀರ್ಮಾನ ಮಾಡುವುದು ಜನ. ಜನರ ಆಶೀರ್ವಾದ ಮುಖ್ಯವಾಗುತ್ತೆ, ಯಾರು ನಮ್ಮಲ್ಲಿ ಗೆದ್ದರೆ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರೆ ಎಂದು ತೀರ್ಮಾನ ಮಾಡಬೇಕಾಗಿರುವುದು ಜನ. ಎದುರಾಳಿ ಯಾರೇ ಇರಲಿ ಅದರ ಬಗ್ಗೆ ನನಗೆ ಚಿಂತೆ ಇಲ್ಲ ಎಂದು ಹೇಳಿದರು. ಸರ್ಕಾರ ತರಾತುರಿಯಲ್ಲಿ, ಅವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಮಾಡಿದೆ. ಅವರ ಉದ್ದೇಶ ಒಳ್ಳೆಯದಿಲ್ಲ. ಮೀಸಲಾತಿ ಕೊಡಬೇಕು ಎಂದಿದ್ದರೆ ಅದರ ಬಗ್ಗೆ ಅಧ್ಯಯನ ಮಾಡಿ ಸಂವಿಧಾನಬದ್ಧವಾಗಿ, ವೈಜ್ಞಾನಿಕವಾಗಿ ನೀಡುತ್ತಿದ್ದರು. ಒಳಮೀಸಲಾತಿ ವಿಚಾರವಾಗಿ ಸರ್ಕಾರ 4 ವರ್ಷದಿಂದ ಸುಮ್ಮನಿದ್ದು ಚುನಾವಣೆ ಬಂದಾಗ ಓಟಿಗಾಗಿ ಕೊನೆ ಘಳಿಗೆಯಲ್ಲಿ ಜಾರಿ ಮಾಡಿದೆ. ನ್ಯಾ. ನಾಗಮೋಹನ್ ದಾಸ್ ಅವರ ಸಮಿತಿ ರಚನೆಯಾದದ್ದು ಸಮ್ಮಿಶ್ರ ಸರ್ಕಾರ ಇದ್ದಾಗ, ವರದಿ ನೀಡಿದ್ದು 2020ರಲ್ಲಿ, ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು 2023ರಲ್ಲಿ. ವರದಿ ಬಂದು ಮೂರು ವರ್ಷಗಳ ವರೆಗೆ ಸರ್ಕಾರ ಏನು ಮಾಡುತ್ತಿತ್ತು? ಎಂದು ಪ್ರಶ್ನಿಸಿದರು. ಮೀಸಲಾತಿ ಹೆಚ್ಚಳ ಮಾಡಿದ ಮೇಲೆ ಒಟ್ಟು ಮೀಸಲಾತಿ ಪ್ರಮಾಣ 56% ಆಯಿತು, ಇದರಿಂದ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮೀಸಲಾತಿ ಪ್ರಮಾಣ 50% ಗಿಂತ ಮೀರಬಾರದು ಎಂಬ ತೀರ್ಪಿನ ಉಲ್ಲಂಘನೆಯಾಗುತ್ತದೆ, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವ ಕೆಲಸವನ್ನು ಸರ್ಕಾರ ಮಾಡಿದೆಯಾ? ಹೀಗಿದ್ದಾಗ ಇದು ಊರ್ಜಿತವಾಗುತ್ತದಾ? ಹೀಗೆ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಮತ್ತು ಅಲ್ಪಸಂಖ್ಯಾತ ವರ್ಗದ ಜನರಿಗೆ ಮೋಸ ಮಾಡಿದೆ ಎಂದರು.