ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.3: ಭ್ರಷ್ಟಾಚಾರದ ವಿಚಾರದಲ್ಲಿ ನಾವು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನೇ ಮಾನದಂಡವಾಗಿಟ್ಟುಕೊಂಡು ಚುನಾವಣೆಯಲ್ಲಿ ಮತ ಕೇಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯ 13ನೇ ಅಡ್ಡರಸ್ತೆಯ ಗಿರಿಜಾರಾಮ ದೈವಜ್ಞ ಭವನದಲ್ಲಿ ಮಾಧ್ಯಮ ಕೇಂದ್ರದ ಉದ್ಘಾಟನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ 40 ಎಂದು ಆರೋಪಿಸುವ ಗುತ್ತಿಗೆದಾರರ ಸಂಘದವರು ಯಾವುದೇ ದಾಖಲೆ, ಸಾಕ್ಷ್ಯಾಧಾರ ನೀಡಿಲ್ಲ ಎಂದು ವಿವರಿಸಿದರು. ಈ ವೇಳೆ ತಾವು ಸ್ವರ್ಧಿಸುವ ಕ್ಷೇತ್ರದ ಬಗ್ಗೆ ಮಾತನಾಡಿದವರು ವಿಧಾನಸಭಾ ಚುನಾವಣೆಯಲ್ಲಿ ತಾವು ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.
ಚುನಾವಣೆಗೆ ಬಿಜೆಪಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದು, ನಾವು ಮಾಡಿದ ಸಾಧನೆಯ ವರದಿ ಹಿಡಿದು ಮತ ಕೇಳುತ್ತಿದ್ದೇವೆ. ಜೊತೆಗೆ ಕಾಂಗ್ರೆಸ್ ನ ದುರಾಡಳಿತದ ಬಗ್ಗೆಯೂ ಜನರಿಗೆ ತಿಳಿಸಲಾಗುವುದು.
ಕಾಂಗ್ರೆಸ್ ಧರ್ಮ ಒಡೆಯುವ ಕೆಲಸ ಮಾಡಿದರು. ಆದರೆ ನಾವು ಧರ್ಮಗಳನ್ನು ಜೋಡಣೆ ಮಾಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕೋಮು ಗಲಭೆಗಳಾದವು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿತ್ತು, ರಾಜ್ಯದ ಅಭಿವೃದ್ಧಿಯೇ ಆಗಿರಲಿಲ್ಲ, ಹೀಗಾಗಿ ಅವು ಕರಾಳ ದಿನಗಳು ಎಂದರು.
ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ನವರಾಗಲೀ, ಗುತ್ತಿಗೆದಾರರ ಸಂಘದವರಾಗಲೀ ಕೋರ್ಟಿನಲ್ಲೂ ದಾಖಲೆ ಕೊಡಲಿಲ್ಲ. ಇವತ್ತಿನವರೆಗೂ ಸಾಕ್ಷಿ ನೀಡಿಲ್ಲ. ರಾಜಕೀಯಪ್ರೇರಿತವಾಗಿ ಕಾಂಗ್ರೆಸ್ ಪಕ್ಷವು ಗುತ್ತಿಗೆದಾರರ ಸಂಘವನ್ನು ಬಳಸಿಕೊಂಡಿದೆ ಎಂದು ಆಕ್ಷೇಪಿಸಿದರು. ತನಿಖೆ ಎದುರಿಸಲು ನಾವು ಈಗಲೂ ಸಿದ್ಧರಿದ್ದೇವೆ. ಲೋಕಾಯುಕ್ತರಿಗೆ ವಿವರ ಕೊಡಿ ಎಂದು ಸವಾಲು ಹಾಕಿದರು.
ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಸರಮಾಲೆ ಇದೆ. ಇವರಿಗೆ ಭ್ರಷ್ಟಾಚಾರದ ಕುರಿತು ಮಾತನಾಡಲು ನೈತಿಕತೆ ಇಲ್ಲ ಎಂದರು.
ನಮ್ಮ ಸರಕಾರ ಕ್ರಿಯಾಶೀಲ, ಜನಪರ, ಜನಕಲ್ಯಾಣ ಮಾಡುವ ಸರಕಾರವಾಗಿದೆ. ಬಡವರು, ದೀನದಲಿತರು, ಹೆಣ್ಣುಮಕ್ಕಳು, ಯುವಕರು, ರೈತರ ಪರವಾಗಿ ಕೆಲಸ ಮಾಡಿದ್ದೇವೆ. ದುಡಿಯುವ ವರ್ಗ ಬಿಜೆಪಿಯೇ ಭರವಸೆ ಎಂದು ನಮ್ಮ ಪರವಾಗಿ ನಿಂತಿದೆ. ಜನರ ಆಶೀರ್ವಾದ, ಬೆಂಬಲದಿಂದ ಮುಂದಿನ 5 ವರ್ಷಗಳ ಕಾಲ ನಮ್ಮ ಸರಕಾರ ಮತ್ತೆ ಆಡಳಿತ ನಡೆಸಲಿದೆ. ಜನರು ಪ್ರಧಾನಿ ಮೋದಿಜಿ ನಾಯಕತ್ವಕ್ಕೆ ಮತ್ತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನವಕರ್ನಾಟಕ ನಿರ್ಮಿಸಲು ನಾವು ಬದ್ಧರಿದ್ದೇವೆ. ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಿಸುತ್ತೇವೆ. ಪ್ರಧಾನಿಯವರ 5 ಟ್ರಿಲಿಯನ್ ಡಾಲರ್ ಇಕಾನಮಿಗೆ 1 ಟ್ರಿಲಿಯನ್ ಡಾಲರ್ ಕೊಡುಗೆ ನಮ್ಮದಾಗಿರಲಿದೆ ಎಂದು ನುಡಿದರು.
ಕಳೆದ 4 ವರ್ಷಗಳಲ್ಲಿ ಸರಾಸರಿ 13.30 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಿದೆ. ನಿರುದ್ಯೋಗದ ರಾಷ್ಟ್ರೀಯ ಸರಾಸರಿ ಶೇ 4.2 ಇದ್ದರೆ ನಮ್ಮದು 2.6 ಇದೆ. ಎಲ್ಲ ಜಾತಿ, ಧರ್ಮಗಳಿಗೆ ಸಮಾನ ಅವಕಾಶ ಇರುವ ಸದೃಢ ಆರ್ಥಿಕ ಶಕ್ತಿಯಾಗಿ ಕರ್ನಾಟಕ ಬೆಳೆದಿದೆ ಎಂದು ತಿಳಿಸಿದರು.
ವಿಶ್ವದ ಅತಿ ದೊಡ್ಡ ಪಕ್ಷ
ಬಿಜೆಪಿ ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ. ಕರ್ನಾಟಕದಲ್ಲೂ ಕೂಡ ಬಹಳ ಆಳವಾಗಿ ಬೇರೂರಿರುವ ಪಕ್ಷವಾಗಿದ್ದು, ಅತ್ಯಂತ ಉತ್ತಮ ಸಂಘಟನೆ ಹೊಂದಿರುವ ಪಕ್ಷ. ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಬಂದು ತನ್ನದೇ ಆದ ಇತಿಹಾಸ ವನ್ನು ಹೊಂದಿದ ಏಕಾಂಗಿಯಾಗಿ ಪಕ್ಷ ಬೆಳೆಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು. ಅವರ ನೇತೃತ್ವದಲ್ಲಿ ಬಿಜೆಪಿ ಪ್ರತಿ ಬಾರಿಯೂ ಬೆಳೆಯುತ್ತಾ ಬಂದಿದೆ.
ದಿವಂಗತ ಅನಂತ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಳೆದ ಪಕ್ಷ ರೈತರಿಗೆ ವಿಶೇಷ ಬಜೆಟ್ ಕೊಡುವುದರ ಜೊತೆಗೆ ಎಲ್ಲಾ ವರ್ಗಗಳಿಗೂ ಹಲವು ಯೋಜನೆಗಳನ್ನು ನೀಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಮುಖ್ಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ, ಕೇಂದ್ರ ಸಚಿವರಾದ ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್, ರಾಷ್ಟ್ರೀಯ ವಕ್ತಾರ ಜಾಫರ್ ಇಸ್ಲಾಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯದ ವಕ್ತಾರ, ಶಾಸಕ ರಾಜುಗೌಡ ಮತ್ತಿತರರು ಭಾಗವಹಿಸಿದ್ದರು.