ಸುದ್ದಿಮೂಲ ವಾರ್ತೆ ,
ಮಸ್ಕಿ ಏ ೦೬ : ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯೂ ಪುರವಂತರ ಸೇವೆಯೊಂದಿಗೆ, ಮಂಗಲ ವಾದ್ಯ ಮೇಳಗಳೊಟ್ಟಿಗೆ ಶುಕ್ರವಾರ ಸಂಭ್ರಮದಿಂದ ಜರುಗಿತು.
ಪಲ್ಲಕ್ಕಿ ಉತ್ಸವ ಮುನ್ನಾ ದಿನವಾದ ಗುರುವಾರ ಗುಹಾ ದೇವಾಲಯದಲ್ಲಿರುವ ದೇವರ ಉತ್ಸವ ಮೂರ್ತಿಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಹೊರ ತೆಗೆದು ಸಕಲ ವಾದ್ಯ ಮೇಳಗಳೊಂದಿಗೆ ಆಂಜನೇಯ ಗುಡಿ ತೀರಕ್ಕೆ ತೆರಳಿ ಗಂಗಾ ಪೂಜೆಯನ್ನು ನೆರವೇರಿಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಅಹೋರಾತ್ರಿ ಭಜನೆ ನಡೆಸಲಾಯಿತು.ಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 5 ಗಂಟೆಗೆ ಸುಪ್ರಭಾತ, ವೇದೋಕ್ತ, ಪಂಚಾಮೃತ, ಅಭಿಷೇಕ ನಂತರ ಷೋಡಷೋಪಚಾರ ಪೂಜೆ, ಮಹಾಮಂಗಳಾರತಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು
ವಿಶೇಷ ಜೋಡು ಪಲ್ಲಕ್ಕಿ ಉತ್ಸವ: ಶುಕ್ರವಾರ ಬೆಳಗ್ಗೆ ಶ್ರೀ ಮೌನೇಶ್ವರರ ಹಾಗೂ ವೀರಭದ್ರದೇವರ ಉತ್ಸವ ಮೂರ್ತಿ ಹಾಗೂ ಪೂಜಾ ಸಾಮಗ್ರಿಗಳನ್ನು ಹೊತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ದೇವಸ್ಥಾನದಿಂದ ಚಾಲನೆ ದೊರೆಯಿತು. ಮೆರವಣಿಗೆ ಪಟ್ಟಣದ ಕನಕ ವೃತ್ತ, ಚೆನ್ನಮ್ಮ ವೃತ್ತ, ದೈವದ ಕಟ್ಟೆ, ಪತ್ತಾರ್ ಓಣಿ, ಸಂತೆ ಬಜಾರ್, ಅಗಸಿ, ಮುದುಗಲ್ ರಸ್ತೆ ಮಾರ್ಗವಾಗಿ ಆಗಮಿಸಿ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ತಲುಪಿತು. ರಾತ್ರಿಯೇ ದೇವರುಗಳ ಪೂಜಾ ಸಾಮಗ್ರಿಗಳನ್ನು ಗುಹಾದೇವಾಲಯದಲ್ಲಿ ಪುನಃ ಪ್ರವೇಶವಾಗುವ ಮೂಲಕ ಜಾತ್ರೆಯೂ ಮಂಗಲೋತ್ಸವಾಯಿತು.
ಈ ವೇಳೆ ಮೌನೇಶ್ವರ ದೇವಸ್ಥಾನದ ದರ್ಮಾಧಿಕಾರಿ ಮೌನೇಶ್ ತಾತ, ಜಗದೇವಪ್ಪ, ಜನಾರ್ದನ್ ಪತ್ತಾರ್, ದೇವರಾಜ್ ಕಂಬಾರ್, ಬಸವ ಶಿಲ್ಪಿ, ಅಮರೇಶ ಚಿಲಕರಾಗಿ, ವೆಂಕಣ್ಣ ಪತ್ತಾರ, ಅಯ್ಯಪ್ಪ ಪತ್ತಾರ, ಗಟ್ಟಪ್ಪ, ಮನೋರ ಪತ್ತಾರ, ರಾಘವೇಂದ್ರ ಪತ್ತಾರ,
ಹಾಗೂ ವಿಶ್ವಕರ್ಮಸಮಾಜದ ವರು, ನೂರಾರು ಭಕ್ತರು ಹಾಜರಿದ್ದರು.