ಸುದ್ದಿಮೂಲವಾರ್ತೆ
ಕನಕಗಿರಿ,ಏ.೬- ತಾಲೂಕಿನ ಆದಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮದ ಕೆಲ ವಾರ್ಡಿನ ಜನ ಎಚ್ಚರಿಕೆ ನೀಡಿದ್ದರ ಹಿನ್ನೆಲೆ ತಹಶೀಲ್ದಾರ್ ಸಂಜಯ ಕಾಂಬ್ಳೆ ಹಾಗೂ ತಾ. ಪಂ. ಚಂದ್ರಶೇಖರ್ ಕಂದಕೂರ ಅವರು ತಾಲೂಕಿನ ನವಲಿ ಗ್ರಾ.ಪಂ ವ್ಯಾಪ್ತಿಯ ಆದಾಪುರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸುವ ಮೂಲಕ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು.
ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ವೇಳೆ ಗ್ರಾಮದ ಹಿರಿಯರೊಬ್ಬರು ಮಾತನಾಡಿ, ನಾವು ಗ್ರಾಮದಲ್ಲಿ ಚುನಾವಣೆಯನ್ನು ಬಹಿಷ್ಕಾರ ಮಾಡಿಲ್ಲ. ಈ ಕುರಿತು ಯಾರು ಪೂರ್ವಭಾವಿ ಸಭೆಯನ್ನು ಮಾಡಿಲ್ಲ. ಗ್ರಾಮದ ನಾಲ್ಕು ಜನ ತಮಗೆ ಬೇಕಾಗಿ ಈ ರೀತಿ ಮಾಡಿದ್ದಾರೆ. ಇಡೀ ಗ್ರಾಮ ಚುನಾವಣೆಯನ್ನು ಬಹಿಷ್ಕಾರ ಮಾಡಿಲ್ಲ. ಇದಕ್ಕೆ ಇಡೀ ಊರಿನ ಒಮ್ಮತ ಇಲ್ಲ. ಊರಲ್ಲಿ ಸುಖಾ-ಸುಮ್ಮನೆ ಗೊಂದಲ ಎಬ್ಬಿಸಲು ಈ ತರ ಮಾಡಿದ್ದಾರೆ ಎಂದರು.
ನಂತರ ತಹಶೀಲ್ದಾರ್ ಸಂಜಯ ಕಾಂಬ್ಳೆ ಮಾತನಾಡಿ, ನಾವು ಅಧಿಕಾರಿಗಳು ನಿಮ್ಮ ಗ್ರಾಮದ ಸಮಸ್ಯೆಯನ್ನು ಬಗೆಹರಿಸಲು ಬಂದಿದ್ದೇವೆ. ನಿಮ್ಮ ಗ್ರಾಮದಲ್ಲಿ ಹತ್ತಿರ ಇರುವ ಎರಡು ಎಕರೆ ಪ್ರದೇಶದಲ್ಲಿ ಶಾಲೆಯ ಕಟ್ಟಡಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಉಪ ತಹಶೀಲ್ದಾರ್ ಮಹಾಂತಗೌಡ ಪಾಟೀಲ್, ಕಂದಾಯ ನಿರೀಕ್ಷಕ ಹನುಮಂತಪ್ಪ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಇದ್ದರು.