ಸುದ್ದಿಮೂಲ ವಾರ್ತೆ
ಕುಷ್ಟಗಿ, ಏ. 07: ಕೊಪ್ಪಳ ಜಿಲ್ಲೆಯ ಬಹುಬೇಡಿಕೆಯ ನೀರಾವರಿ ಯೋಜನೆಗಳ ಪೈಕಿ ಕೃಷ್ಣಾ ಬಿ’ಸ್ಕೀಂನಡಿ ಬರುವ ಕೊಪ್ಪಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಾರಂಭದಿಂದಲೂ ಅಡ್ಡಗಾಲು ಹಾಕಿರುವ ಕುಷ್ಟಗಿಯ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹಾಗೂ ಪಕ್ಕದ ಯಲಬುರ್ಗಾ ಮಾಜಿ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಗ್ಯರಲ್ಲ ಎಂದು ನೀರಾವರಿ ಹೋರಾಟಗಾರರಾದ ಹಿರಿಯ ಪತ್ರಕರ್ತ ಗಂಗಾಧರ ಕುಷ್ಟಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕುಷ್ಟಗಿ ಶಾಸಕ ಬಯ್ಯಾಪುರ ಅವರು ಹರಿ-ಬ್ರಹ್ಮ ಬಂದರೂ ಕೃಷ್ಣಾ ಬಿ ಸ್ಕೀಂ ಯೋಜನೆ ಅನುಷ್ಠಾನ ಕಷ್ಟಸಾಧ್ಯ ಎಂದರೆ, ಪಕ್ಕದ ಯಲಬುರ್ಗಾ ಮಾಜಿ ಶಾಸಕ ರಾಯರೆಡ್ಡಿ ಅವರು ಆಲಮಟ್ಟಿ ಜಲಾಶಯದಿಂದ ಕುಷ್ಟಗಿ-ಯಲಬುರ್ಗಾ ತಾಲೂಕು ಎತ್ತರ ಪ್ರದೇಶದಲ್ಲಿದ್ದು, ಯೋಜನೆ ಅನುಷ್ಠಾನದಿಂದ ರೈತರ ಜಮೀನಿಗೆ ನೀರು ಹರಿಯುವುದಿಲ್ಲವೆಂದು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಹೇಳಿದ್ದು ಹಾಗೂ ಪತ್ರಿಕಾ ಹೇಳಿಕೆ ಕೊಟ್ಟ ದಾಖಲೆಗಳಿವೆ. ಈ ಭಾಗದ ರೈತರು, ಮಠಾಧೀಶರು, ಮಾಧ್ಯಮಗಳ ಸತತ ಹೋರಾಟ ಪ್ರಯತ್ನದ ಬಲದಿಂದ ಕೃಷ್ಣಾ ಬಿ’ಸ್ಕೀಂನ ಕೊಪ್ಪಳ ನೀರಾವರಿ ಯೋಜನೆ ಜಾರಿಗೆ ಬರಲು ಸಾಧ್ಯವಾಯಿತು. ಇದೇ ಯೋಜನೆಯಡಿ ಒಳಪಡುವ ಕುಷ್ಟಗಿ-ಯಲಬುರ್ಗಾ ತಾಲೂಕುಗಳಲ್ಲಿ ಕೆರೆ ತುಂಬಿಸೋ ಯೋಜನೆ ಅನುಷ್ಠಾನವಾಗಲು ಕಾರಣವಾಯಿತು. ಪ್ರಾಯೋಗಿಕವಾಗಿ ಕೆರೆಗಳಿಗೆ ನೀರು ಹರಿಸಲಾಯಿತು. ಆದರೆ, ಹೋರಾಟಕ್ಕೆ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದವರೇ ತಮ್ಮ ಪರಿಶ್ರಮದಿಂದ ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಯಶಸ್ವಿಯಾಗಿದೆ ಎನ್ನುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಕುಟುಕಿದರು.
ಚುನಾವಣೆಯಲ್ಲಿ ಯಾರೇ ಸ್ಪರ್ಧಿಸಲಿ ನನ್ನ ಅಭ್ಯಂತರವಿಲ್ಲ. ಅಮರೇಗೌಡ, ರಾಯರೆಡ್ಡಿ ಅಂಥ ಸ್ವಾರ್ಥಿ ರಾಜಕಾರಣಿಗಳನ್ನು ಬಿಟ್ಟು ಉಳಿದವರ ಪೈಕಿ ಯಾರು ನಮ್ಮ ಕ್ಷೇತ್ರದ ಅಭಿವೃದ್ಧಿಗೆ, ನಮ್ಮ ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ಹಾಗೂ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಾರೊ ಅವರನ್ನು ಬೆಂಬಲಿಸಬೇಕು ಎಂದು ಒಒ ಜನತೆಯಲ್ಲಿ ಮನವಿ ಮಾಡಿದ ಗಂಗಾಧರ ಕುಷ್ಟಗಿ ಅವರು, ಕುಷ್ಟಗಿ ತಾಲೂಕಿನಲ್ಲಿ ದುಡಿಮೆ ಇಲ್ಲದೆ ಗುಳೆ ಹೋಗುವ ಪರಿಸ್ಥಿತಿ ಇದೆ. ಶಾಸಕ ಬಯ್ಯಾಪೂರ ಹೇಳುವ ಪ್ರಕಾರ ಅಭಿವೃದ್ಧಿ ಎಂದರೆ ಕೇವಲ ಬಿಲ್ಡಿಂಗ್, ರಸ್ತೆ, ನಿರ್ಮಿಸುವುದಲ್ಲ. ಜನಪ್ರತಿನಿಧಿಯಾಗಿ ಜನರ ಪರ ಧ್ವನಿ ಎತ್ತುವ ಕೆಲಸ ಮಾಡಬೇಕಿತ್ತು. ಇತ್ತೀಚೆಗೆ ಖಾಸಗಿ ನ್ಯೂಸ್ ವಾಹಿನಿಯೊಂದು ಪ್ರಸಾರ ಮಾಡಿದ ಭ್ರಷ್ಟಾಚಾರ ಅನಾವರಣ ಇವರೆಂಥವರು ಎಂಬುದು ಸಾಬೀತುಪಡಿಸುತ್ತದೆ ಎಂದರು.
ಸಿನಿ ತಾರೆಯರಾದ ಸಂಜನಾ ಗುಲ್ರಾಣಿ ಹಾಗೂ ರಾಗಿಣಿ ಡ್ರಗ್ಸ್ ಕೇಸಲ್ಲಿ ಅರೆಸ್ಟ್ ಆದಾಗ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ ಶಾಸಕ ಬಯ್ಯಾಪೂರರ ಸಂಸ್ಕ್ರತಿ ಎಂಥದ್ದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದ ಪತ್ರಕರ್ತ ಗಂಗಾಧರ ಕುಷ್ಟಗಿ, ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಪ್ರಸ್ತಾಪ ಮುನ್ನ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಮೋದಿ ಸರಕಾರಕ್ಕೆ ಒತ್ತಾಯ ಮಾಡಲಿಲ್ಲ. ಸಂಸತ್ತಿನಲ್ಲಿ ನಮ್ಮ ಜಿಲ್ಲೆಯ ರೈತರಿಗೆ ಅನುಕೂಲವಾಗುವ ನೀರಾವರಿ ಯೋಜನೆಗೆ ಸಹಕಾರ ಕೇಳಲಿಲ್ಲ. ಇಂಥ ರಾಜಕಾರಣಿಗಳಿಂದ ನಮ್ಮ ಹಿಂದುಳಿದ ಪ್ರದೇಶ ಅಭಿವೃದ್ಧಿ ಸಾಧ್ಯವಿಲ್ಲ. ಇವರಿಗೆ ಚುನಾವಣೆಯಲ್ಲಿ ತಿರಸ್ಕರಿಸಿ ಯೋಗ್ಯ ವ್ಯಕ್ತಿಗಳಿಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.